Mysore
21
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಸಿಎಂ ಸ್ಥಾನ ಅರ್ಧಕ್ಕೆ ಬಿಟ್ಟುಕೊಡುವಂತೆ ಯಾರೂ ಸೂಚನೆ ಕೊಟ್ಟಿಲ್ಲ: ಸತೀಶ್ ಜಾರಕಿಹೊಳಿ

ದಾವಣಗೆರೆ: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಐದು ವರ್ಷ ಆಡಳಿತ ಮಾಡುತ್ತಾರೆ. ಅವರು ಅವಧಿ ಪೂರೈಸುವ ವಿಶ್ವಾಸ ಇದೆ. ಎರಡೂವರೆ ವರ್ಷ ಅಧಿಕಾರ ಹಂಚಿಕೆಯಾಗಿದೆ ಎಂಬುದರಲ್ಲಿ ಹುರುಳಿಲ್ಲ. ಅರ್ಧಕ್ಕೆ ಬಿಟ್ಟುಕೊಡುವ ಕುರಿತಂತೆ ಯಾರೂ ಸೂಚನೆ ನೀಡಿಲ್ಲ ಎಂದು ಲೋಕೋಪಯೋಗಿ ಸಚಿವ ಹಾಗೂ ಸಿದ್ದರಾಮಯ್ಯರ ಆಪ್ತ ಸತೀಶ್‌ ಜಾರಕಿಹೊಳಿ ತಿಳಿಸಿದರು.

ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿಎಂ ಸ್ಥಾನ ಇದುವರೆಗೂ ಅರ್ಧಕ್ಕೆ ಅಂತ ಯಾರೂ ಹೇಳಿಲ್ಲ, ಅದ್ದರಿಂದ ಅವರೇ ಮುಂದುವರೆಯುತ್ತಾರೆ ಎನ್ನುವ ವಿಶ್ವಾಸ ಇದೆ, ಅದು ಪಕ್ಷದ ತೀರ್ಮಾನಕ್ಕೆ ಬಿಟ್ಟ ವಿಚಾರ ಎಂದರು.

ಅಕ್ಕಿ ಖರೀದಿ ವಿಚಾರಕ್ಕೆ ಸಂಬಂಧಿಸಿದ್ದಂತೆ ಸಣ್ಣ ಪುಟ್ಟ ಸಮಸ್ಯೆಗಳಿವೆ. ಸದ್ಯದಲ್ಲಿಯೇ ಎಲ್ಲವನ್ನೂ ಸರಿಪಡಿಸುತ್ತೇವೆ. ವಿರೋಧಪಕ್ಷ ಬಿಜೆಪಿಯವರು ವಿನಾಕಾರಣ ಜನರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಹೋರಾಟ ಮಾಡುವುದು, ಬಿಡುವುದು ಆ ಪಕ್ಷಕ್ಕೆ ಬಿಟ್ಟ ವಿಚಾರ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು 15 ಲಕ್ಷ ರೂಪಾಯಿ ಅಕೌಂಟ್ ಗೆ ಹಾಕಲಾಗುವುದು ಎಂಬ ಭರವಸೆ ನೀಡಿ 9 ವರ್ಷಗಳ ಮೇಲಾಯ್ತು. ಆದ್ರೂ ಇದುವರೆಗೂ ನಯಾಪೈಸೆ ಕೂಡ ಬಂದಿಲ್ಲ. ವಿದೇಶಗಳ ಬ್ಯಾಂಕ್ ನಲ್ಲಿ ಇಟ್ಟಿರುವ ಕಪ್ಪು ಹಣ ತರುತ್ತೇವೆ ಎಂದಿದ್ದರು. ಇಷ್ಟು ವರ್ಷವಾದರೂ ತರಲು ಆಗಿಲ್ಲ. ಅವರು ನೀಡಿದ್ದ 10 ಭರವಸೆಗಳು ಹಾಗೆಯೇ ಉಳಿದಿವೆ ಎಂದು ಆರೋಪಿಸಿದರು.

ಸಮಸ್ಯೆಗಳನ್ನು ಸರಿಪಡಿಸಲು ಕಾಲಾವಕಾಶ ಬೇಕು. ಎಲ್ಲವನ್ನೂ ಒಮ್ಮೆಲೆ ಸರಿಪಡಿಸುತ್ತೇವೆ ಎಂದರೆ ಆಗದು. ಬಿಜೆಪಿಯವರು ಪಠ್ಯ ಪರಿಷ್ಕರಣ ಮಾಡಿದ್ದು, ಶಿಕ್ಷಣ ನೀತಿಗೆ ವಿರುದ್ಧವಾಗಿದೆ. ಅದನ್ನು ಬದಲಾವಣೆ ಮಾಡ್ತೀವಿ ಎಂದು ಹೇಳಿದ್ದೇವೆ, ಬದಲಾವಣೆ ಮಾಡುತ್ತೇವೆ, ಇದರಲ್ಲಿ ಗೊಂದಲ ಇಲ್ಲ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ