Mysore
20
overcast clouds
Light
Dark

ಭಾರತದ ಪರಿಕಲ್ಪನೆಯನ್ನು ಕಗ್ಗೊಲೆ ಮಾಡುವ ಯಾರೂ ಭಾರತವನ್ನು ಪ್ರೀತಿಸಲು ಸಾಧ್ಯವಿಲ್ಲ: ರಾಹುಲ್‌ ಗಾಂಧಿ

ವಯನಾಡ್ (ಕೇರಳ) : ಸಂಸದ ಸ್ಥಾನವನ್ನು ಮರಳಿ ಪಡೆದ ನಂತರ ತಾವು ಪ್ರತಿನಿಧಿಸುತ್ತಿರುವ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಪ್ರಥಮ ಬಾರಿಗೆ ಭೇಟಿ ನೀಡಿರುವ ರಾಹುಲ್ ಗಾಂಧಿ, ವಯನಾಡ್ ನನ್ನ ಕುಟುಂಬವಾಗಿದ್ದು, ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಗೆ ಕುಟುಂಬಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದು ತಿಳಿದಿಲ್ಲ ಎಂದು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಹೇಳಿದ್ದಾರೆ ಎಂದು hindustantimes.com ವರದಿ ಮಾಡಿದೆ.

“ಒಂದು ವೇಳೆ ಯಾರಾದರೂ ಇಬ್ಬರು ಸಹೋದರರನ್ನು ಅಥವಾ ತಂದೆಯನ್ನು ಆತನ ಮಗಳಿಂದ ಬೇರ್ಪಡಿಸಲು ಬಯಸಿದರೆ ಅವರ ಸಂಬಂಧವು ಮತ್ತಷ್ಟು ಬಲಿಷ್ಠವಾಗುತ್ತದೆ. ಅವರು ನನ್ನನ್ನು ಹಾಗೂ ನಿಮ್ಮನ್ನು ಬೇರ್ಪಡಿಸಲು ಪ್ರಯತ್ನಿಸಿದಷ್ಟೂ ನಾವಿಬ್ಬರೂ ಮತ್ತಷ್ಟು ಹತ್ತಿರವಾಗುತ್ತೇವೆ ಎಂಬ ಸಂಗತಿಯನ್ನು ಅವರು ಅರ್ಥ ಮಾಡಿಕೊಳ್ಳಲಾರರು.

ಒಂದು ವೇಳೆ ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿದರೆ ವಯನಾಡ್ ನೊಂದಿಗೆ ಆತನ ಸಂಬಂಧ ಮುರಿದು ಬೀಳಲಿದೆ ಎಂದು ಅವರು ಭಾವಿಸಿದ್ದಾರೆ. ಇಲ್ಲ, ಒಂದು ವೇಳೆ ನೀವು ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿದರೆ, ಜನರೊಂದಿಗಿನ ಆತನ ಸಂಬಂಧ ಮತ್ತಷ್ಟು ಬಲಿಷ್ಠವಾಗುತ್ತದೆ. ನೀವು ನನ್ನ ಪರವಾಗಿ ನಿಂತಿದ್ದೀರಿ. ನನ್ನನ್ನು 50 ಬಾರಿ ಅನರ್ಹಗೊಳಿಸಿದರೂ, ವಯನಾಡ್ ನೊಂದಿಗಿನ ನನ್ನ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರಲು ಸಾಧ್ಯವಿಲ್ಲ ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕಿದೆ” ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

“ಬಿಜೆಪಿ ಮಾಡುವುದೇ ಈ ಕೆಲಸವನ್ನು. ಅವರು ಕುಟುಂಬಗಳನ್ನು ಬೇರ್ಪಡಿಸುತ್ತಾರೆ. ಮಣಿಪುರದಲ್ಲಿ ಅವರು ಅದನ್ನೇ ಮಾಡಿದರು. ನಾವು ಅದನ್ನು ಮರು ನಿರ್ಮಾಣ ಮಾಡುತ್ತೇವೆ. ಒಂದು ವೇಳೆ ನೀವು ಎರಡು ತಿಂಗಳಲ್ಲಿ ಮಣಿಪುರಕ್ಕೆ ಬೆಂಕಿ ಹಚ್ಚಿದರೆ, ನಾವದನ್ನು ಐದು ವರ್ಷಗಳೊಳಗೆ ಮರು ನಿರ್ಮಾಣ ಮಾಡುತ್ತೇವೆ” ಎಂದು ಅವರು ಹೇಳಿದ್ದಾರೆ

“ಕುಟುಂಬವೆಂದರೇನು? ಅದು ನಿಮ್ಮನ್ನು ನೋಡಿಕೊಳ್ಳುತ್ತದೆ, ನಿಮ್ಮನ್ನು ರಕ್ಷಿಸುತ್ತದೆ, ನಿಮಗೆ ಗೌರವ ನೀಡುತ್ತದೆ. ನೀವು ನನಗೆ ಮಾಡಿರುವುದು ಇದನ್ನೇ. ನೀವು ನನ್ನನ್ನು ರಕ್ಷಿಸಿದಿರಿ, ನನಗೆ ಪ್ರೀತಿ, ವಾತ್ಸಲ್ಯ ನೀಡಿದಿರಿ. ನೀವು ನನ್ನನ್ನು 50 ಬಾರಿ, 100 ಬಾರಿ ಅನರ್ಹಗೊಳಿಸಬಹುದು. ಆದರೆ, ಅದರಿಂದ ಈ ಸಂಬಂಧ ಮತ್ತಷ್ಟು ಬಲಿಷ್ಠವಾಗಲಿದೆ.” ಎಂದೂ ರಾಹುಲ್ ಗಾಂಧಿ ತಿಳಿಸಿದ್ದಾರೆ.

“ಭಾರತವೊಂದು ಕುಟುಂಬವಾಗಿದ್ದು, ಅದನ್ನು ವಿಭಜಿಸಲು ಅವರು ಬಯಸುತ್ತಿದ್ದಾರೆ. ಮಣಿಪುರ ಕೂಡಾ ಒಂದು ಕುಟುಂಬವಾಗಿದ್ದು, ಅದನ್ನು ನಾಶಪಡಿಸಲು ಅವರು ಯತ್ನಿಸುತ್ತಿದ್ದಾರೆ. ಬಿಜೆಪಿ ಪೊಲೀಸರಿಂದ ಸಾವಿರಾರು ಕುಟುಂಬಗಳು ನಾಶವಾಗಿವೆ. ನಾವು ಜನರನ್ನು ಒಗ್ಗೂಡಿಸಿ, ಕುಟುಂಬಗಳನ್ನು ಮರು ನಿರ್ಮಾಣ ಮಾಡುತ್ತೇವೆ” ಎಂದು ಅವರು ಭರವಸೆ ನೀಡಿದ್ದಾರೆ.

ಮಣಿಪುರದ ಅನುಭವವನ್ನು ಸ್ಮರಿಸಿಕೊಂಡ ರಾಹುಲ್ ಗಾಂಧಿ, ಬಿಜೆಪಿ ಮಣಿಪುರವನ್ನು ಕಗ್ಗೊಲೆ ಮಾಡಿದೆ; ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲು ಅವಕಾಶ ನೀಡಿದೆ. “ದೇಶದ ಪ್ರಧಾನಿಯಾಗಿ ನೀವು ನಗುತ್ತಿದ್ದೀರಾ? ಭಾರತ ಮಾತೆಯ ಕಗ್ಗೊಲೆ ಬಗ್ಗೆ ಮಾತನಾಡಲು ನೀವು ಕೇವಲ ಎರಡು ನಿಮಿಷ ವ್ಯಯಿಸಿದಿರಿ. ಹೀಗೆ ಮಾಡಲು ನಿಮಗೆಷ್ಟು ಧೈರ್ಯ? ಭಾರತದ ಪರಿಕಲ್ಪನೆಯನ್ನು ನೀವು ಅದ್ಹೇಗೆ ಅಗೌರವಿಸುತ್ತೀರಿ? ಕಳೆದ ನಾಲ್ಕು ತಿಂಗಳಿನಿಂದ ನೀವೇನು ಮಾಡುತ್ತಿದ್ದಿರಿ? ನೀವೇಕೆ ಅಲ್ಲಿಗೆ ತೆರಳಲಿಲ್ಲ? ನೀವು ಹಿಂಸಾಚಾರವನ್ನು ತಡೆಯಲು ಏಕೆ ಯತ್ನಿಸಲಿಲ್ಲ? ಯಾಕೆಂದರೆ, ನೀವು ರಾಷ್ಟ್ರೀಯವಾದಿಯಲ್ಲ. ಭಾರತದ ಪರಿಕಲ್ಪನೆಯನ್ನು ಕಗ್ಗೊಲೆ ಮಾಡುವ ಯಾರೂ ರಾಷ್ಟ್ರೀಯವಾದಿಯಾಗಿರಲು ಸಾಧ್ಯವಿಲ್ಲ. ಭಾರತವನ್ನು ಪ್ರೀತಿಸಲು ಸಾಧ್ಯವಿಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ