ನಟ ಕಿಚ್ಚ ಸುದೀಪ್ ಅವರು ಈಚೆಗೆ ಬಹಿರಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಚುನಾವಣಾ ಪ್ರಚಾರ ಮಾಡುವುದಾಗಿ ಘೋಷಣೆ ಮಾಡಿದ್ದರು. ಅಷ್ಟೇ ಅಲ್ಲ, ಸಿಎಂ ಬೊಮ್ಮಾಯಿ ಅವರು ಸೂಚಿಸುವ ಬಿಜೆಪಿ ಅಭ್ಯರ್ಥಿಗಳ ಪರವಾಗಿಯೂ ಪ್ರಚಾರ ಮಾಡುವುದಾಗಿಯೂ ಸುದೀಪ್ ಹೇಳಿದ್ದರು. ಇದೀಗ ಮತ್ತೋರ್ವ ಸ್ಟಾರ್ ನಟ ರಿಷಬ್ ಶೆಟ್ಟಿ ಕೂಡ ಬಿಜೆಪಿ ಪರ ಪ್ರಚಾರ ಮಾಡುತ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಗುರುವಾರ (ಏ.13) ಉಡುಪಿಯಲ್ಲಿ ಸಿಎಂ ಬೊಮ್ಮಾಯಿ ಮತ್ತು ರಿಷಬ್ ಕೂಡ ಮುಖಾಮುಖಿ ಆಗಿದ್ದರು. ರಿಷಬ್ ಕೂಡ ಬಿಜೆಪಿ ಪರ ಪ್ರಚಾರ ಮಾಡ್ತಾರೆ ಅನ್ನೋ ಮಾತು ಜೋರಾಗಿ ಕೇಳಿಬಂದಿದೆ. ಇದೀಗ ಬಗ್ಗೆ ಸ್ಪಷ್ಟನೆ ನೀಡಿರುವ ರಿಷಬ್ ಶೆಟ್ಟಿ, ರಾಜಕೀಯದ ಬಣ್ಣ ಬೇಡ ಎಂದು ಹೇಳಿದ್ದಾರೆ.
ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಇರಲಿ : ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ನಟ ರಿಷಬ್ ಶೆಟ್ಟಿ ಗುರುವಾರ (ಏ.13) ಒಟ್ಟಿಗೆ ಕಾಣಿಸಿಕೊಂಡಿದ್ದರು. ಸಿಎಂ ಅವರನ್ನು ಭೇಟಿಯಾಗಿದ್ದರ ಬಗ್ಗೆ ಸ್ಪಷ್ಟನೆ ನೀಡಿರುವ ರಿಷಬ್ ಶೆಟ್ಟಿ, ‘ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಹೋದಾಗ ಮಾನ್ಯ ಮುಖ್ಯಮಂತ್ರಿಗಳ ಭೇಟಿಯಾಯಿತು, ರಾಜಕೀಯದ ಬಣ್ಣ ಬೇಡ. ಕಾಂತಾರದ ಬರವಣಿಗೆಯಲ್ಲಿ ಸಂಪೂರ್ಣ ತೊಡಗಿಕೊಂಡಿದ್ದೇನೆ, ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಇರಲಿ..’ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲಿಗೆ ತಮ್ಮ ಸಂಪೂರ್ಣ ಗಮನ ಕಾಂತಾರ 2 ಸಿನಿಮಾದ ಮೇಲಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ ರಿಷಬ್ ಶೆಟ್ಟಿ.





