Mysore
20
overcast clouds
Light
Dark

ನೈಸ್ ರಸ್ತೆ ಟೋಲ್ ದರ ಶೇ.13ರಷ್ಟು ಏರಿಕೆ : ಜು.1ನೇ ರಿಂದಲೇ ಪರಿಷ್ಕೃತ ಸುಂಕ ಜಾರಿ

ಬೆಂಗಳೂರು : ಅಗತ್ಯ ವಸ್ತುಗಳ ದರ ಏರಿಕೆಯಾಗುತ್ತಿರುವ ಮಧ್ಯೆಯೇ ನಂದಿ ಎಕಾನಮಿಕ್ ಕಾರಿಡಾರ್ ಎಂಟರ್‌ಪ್ರೈಸಸ್ (ನೈಸ್ – NICE) ಬೆಂಗಳೂರು-ಮೈಸೂರು ಇನ್ಪ್ರಾಸ್ಟ್ರಕ್ಚರ್ – ಕಾರಿಡಾರ್ ಯೋಜನೆ ವ್ಯಾಪ್ತಿಯ ವರ್ತುಲ ರಸ್ತೆ ಮತ್ತು ಲಿಂಕ್ ರಸ್ತೆಯ ಟೋಲ್ ದರದಲ್ಲಿ ಸರಾಸರಿ ಶೇ. 13ರಷ್ಟು ಹೆಚ್ಚಳ ಮಾಡಿದೆ. ಪರಿಷ್ಕೃತ ದರವು ಇದೇ ಜುಲೈ 1ರಿಂದಲೇ ಜಾರಿಯಾಗಿ ಬರಲಿದೆ.

ರಾಜ್ಯ ಸರ್ಕಾರದೊಂದಿಗೆ 2000 ಇಸವಿಯಲ್ಲಿ ಮಾಡಿಕೊಂಡ ಯೋಜನೆಯ ಮೂಲ ಕರಾರಿನ ಪ್ರಕಾರ ಪ್ರತಿ ವರ್ಷ ಟೋಲ್ ದರ ಪರಿಷ್ಕರಿಸಬೇಕಿತ್ತು. ಆದರೆ, ಕೋವಿಡ್-19 ಸಂಕಷ್ಟ ಹಾಗೂ ಆರ್ಥಿಕ ಹಿಂಜರಿತದ ಕಾರಣಕ್ಕೆ 2017ರಿಂದ 2021ರ ತನಕ 5 ವರ್ಷಗಳಿಂದ ಟೋಲ್‌ ದರ ಪರಿಷ್ಕರಣೆ ಆಗಿರಲಿಲ್ಲ. ಆದರೆ 2022ರ ಜೂನ್ ನಲ್ಲಿ ಶೇ.17ರಷ್ಟು ಸರಾಸರಿಯಾಗಿ ಟೋಲ್ ದರವನ್ನು ಏರಿಕೆ ಮಾಡಿತ್ತು. ಇದೀಗ ಪುನಃ ಟೋಲ್ ದರವನ್ನು ನೈಸ್ ಏರಿಕೆ ಮಾಡಿದೆ.

ಎರಡೂ ಮಾರ್ಗದಲ್ಲಿ ಒಟ್ಟಾರೆ 100 ಕಿ.ಮೀ ಉದ್ದವಿರುವ ನೈಸ್ ರಸ್ತೆಯಲ್ಲಿ ಅತಿಹೆಚ್ಚು ಟೋಲ್ ದರ ಏರಿಕೆಯಾಗಿರೋದು ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ 9.55 ಕಿ.ಮೀ ಉದ್ದದ ಮಾರ್ಗದಲ್ಲಿ ಬಸ್ಸಿನಲ್ಲಿ ತೆರಳಲು 155 ರೂ. ದರ ನಿಗದಿ ಮಾಡಲಾಗಿದೆ. ಕಳೆದ ವರ್ಷದ ದರಕ್ಕಿಂತ 20 ರೂ.ನಷ್ಟು ಹೆಚ್ಚಳ ( 2022ನಲ್ಲಿ 135 ರೂ.)ವಾಗಿದೆ. ಇನ್ನು ಕಳೆದ ವರ್ಷದ ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆಯ 8.74 ಕಿ.ಮೀ ದೂರಕ್ಕೆ ಬಸ್ಸಿಗೆ 125 ರೂ.ನಷ್ಟು ಟೋಲ್ ನಿಗದಿಪಡಿಸಿದ್ದರೆ, ಈ ವರ್ಷ 145 ರೂ.ನಷ್ಟು ಅಂದರೆ 20 ರೂ.ನಷ್ಟು ಏರಿಕೆಯಾಗಿದೆ.

ಬೆಲೆ ಏರಿಕೆ ಹೀಗೆ ಹೆಚ್ಚಳವಾಗಿದೆ : ಉಳಿದಂತೆ ಕಾರಿಗೆ 5 ರೂ.ನಿಂದ 10ರೂ., ಬಸ್ಸಿಗೆ 20ರೂ., ಟ್ರಕ್ಕಿಗೆ 5ರೂ. ನಿಂದ 15 ರೂ.ಗಳಿಗೆ, ಲಘು ವಾಣಿಜ್ಯ ವಾಹನ (LMV) ಕ್ಕೆ 5 ರಿಂದ 10 ರೂ. ಹಾಗೂ ದ್ವಿಚಕ್ರ ವಾಹನಗಳಿಗೆ 2 ರೂ.ನಿಂದ 5 ರೂಪಾಯಿನಷ್ಟು ಟೋಲ್ ಏರಿಕೆ ಮಾಡಲಾಗಿದೆ.

‘ಕಳೆದ ವರ್ಷ ಸರಾಸರಿಯಾಗಿ ಶೇ.17ರಷ್ಟು ಟೋಲ್ ದರವನ್ನು ಏರಿಕೆ ಮಾಡಲಾಗಿತ್ತು. ಆದರೆ ಈ ವರ್ಷ ಶೇ.13ರಷ್ಟು ಮಾತ್ರ ಟೋಲ್‌ ದರವನ್ನು ಏರಿಕೆ ಮಾಡಲಾಗಿದೆ. ನಮ್ಮಟೋಲ್ ದರ ಏರಿಕೆ ಮಾಡಿಯೂ ಎಲೆಕ್ಟ್ರಾನಿಕ್ ಸಿಟಿ ಬಳಿಯ ಎಲಿವೇಟೆಡ್ ಟೋಲ್ ಪ್ಲಾಜಾ ಬಿಇಟಿಎಲ್ ವಿಧಿಸಿರುವ ಸುಂಕಕ್ಕಿಂತ ಕಡಿಮೆಯಿದೆ. ನೂತನ ದರವನ್ನು ಶನಿವಾರ (ಜು.1)ರಿಂದಲೇ ಜಾರಿಗೆ ಬರಲಿದೆ’ ನೈಸ್ ರಸ್ತೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಯೂಕ್ ಅವರು ತಿಳಿಸಿದ್ದಾರೆ.

ನೈಸ್ ರಸ್ತೆಯು ಮಾದಾವರದಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ ಒಟ್ಟು 42 ಕಿ.ಮೀ ಉದ್ದವಿದೆ. ಅದೇ ರೀತಿ ಹೊಸಕೆರೆ ಹಳ್ಳಿಯಿಂದ ಕ್ಲೋವರ್ ಲೀಫ್ ಜಂಕ್ಷನ್ ವರೆಗೆ 8 ಕಿ.ಮೀ ಸೇರಿದಂತೆ ಒಟ್ಟಾರೆ 50 ಕಿ.ಮೀ ಉದ್ದವನ್ನು ಹೊಂದಿದೆ. ಎರಡೂ ಮಾರ್ಗದ ರಸ್ತೆಯ ಒಟ್ಟಾರೆ ಉದ್ದ 100 ಕಿ.ಮೀಯಿದ್ದು, ಆ ಪೈಕಿ 9 ಕಿ.ಮೀ ನಷ್ಟು ಎರಡೂ ಬದಿಯಲ್ಲಿ ಕಾಂಕ್ರೀಟ್ ಹಾಕುವ ಕಾಮಗಾರಿ ಬಾಕಿಯಿದ್ದು, ಉಳಿದಂತೆ 91 ಕಿ.ಮೀನಷ್ಟು ಉದ್ದದ ರಸ್ತೆಗೆ ವೈಟ್ ಟಾಪಿಂಗ್ ಕಾಮಗಾರಿಯನ್ನು ಮುಗಿಸಲಾಗಿದೆ ಎಂದಿದ್ದಾರೆ.

ರಸ್ತೆ ಕಾಮಗಾರಿಯಿಂದ ಟ್ರಾಫಿಕ್ ಜಾಮ್ : ನೈಸ್ ರಸ್ತೆಯಿಂದ ಬೆಂಗಳೂರಿಗೆ ಬಂದು ಹೋಗುವ ಹಾಗೂ ಬೆಂಗಳೂರಿನ ಹೊರ ಭಾಗದಿಂದಲೇ ವಿವಿಧ ರಾಜ್ಯಗಳಿಗೆ ಸುಗಮ ಸಂಪರ್ಕವನ್ನು ಕಲ್ಪಿಸುತ್ತಿದೆ. ಇತ್ತೀಚೆಗಷ್ಟೆ ಕನಕಪುರ ನೈಸ್‌ ರಸ್ತೆಯಿಂದ ಬನ್ನೇರುಘಟ್ಟ ರಸ್ತೆ ಮಧ್ಯೆದ ಪುರುವಂಕರ ಅಪಾರ್ಟ್‌ ಮೆಂಟ್ ಬಳಿಯಲ್ಲಿ ಒಂದು ಬದಿ ರಸ್ತೆ ಎತ್ತರ ಕಡಿಮೆಯಿದ್ದು, ಕಳೆದ ಆರು ತಿಂಗಳಿನಿಂದ ಕಾಮಗಾರಿ ನಡೆಸಿ ಅದನ್ನು ಮೇಲ್ಮಟ್ಟಕ್ಕೆ ತಂದು ಆ ಭಾಗದಲ್ಲಿ ವೈಟ್ ಟಾಪಿಂಗ್ ಮಾಡಲಾಗಿದೆ. ಆದರೆ ಇನ್ನೊಂದು ಬದಿಯಲ್ಲಿ ಒಂದು ಕಿ.ಮೀ ತನಕ ರಸ್ತೆ ಕಾಮಗಾರಿ ಆರಂಭಿಸಲಾಗಿದೆ. ಹಾಗಾಗಿ ಎಲೆಕ್ಟ್ರಾನಿಕ್ ಸಿಟಿಯಿಂದ ಕನಕಪುರ ರಸ್ತೆ ಕಡೆಗೆ ಸಾಗುವ ಮಾರ್ಗದಲ್ಲಿ ಎರಡು ಮಾರ್ಗದ ಫೋರ್ ಲೇನ್ ಮಾಡಿದ್ದು ಈ ಭಾಗದಲ್ಲಿ ದೊಡ್ಡ ದೊಡ್ಡ ಟ್ರಕ್ ಗಳು ಸಾಗುವಾಗ ನಿಧಾನಗತಿಯಲ್ಲಿ ಚಲಿಸುತ್ತಿರುವುದರಿಂದ ಕಳೆದ ಕೆಲವು ದಿನಗಳಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ ಎಂದು ವಾಹನ ಸವಾರರು ದೂರುತ್ತಿದ್ದಾರೆ.

91 ಕಿ.ಮೀವರೆಗೆ ಈಗಾಗಲೇ ರಸ್ತೆಗೆ ಕಾಂಕ್ರಿಟ್ ಹಾಕಲಾಗಿದ್ದು, ಉಳಿದ ಕಾಮಗಾರಿ ನಡೆಸುವ ಸಂದರ್ಭದಲ್ಲಾದರೂ ಆ ಮಾರ್ಗದಲ್ಲಿ ಟೋಲ್ ಸಂಗ್ರಹವನ್ನು ಕಾಮಗಾರಿ ಮುಗಿಯುವ ತನಕ ನಿಲ್ಲಿಸಿದರೆ ಸೂಕ್ತ ಎಂಬ ಒತ್ತಾಯವೂ ವಾಹನ ಸವಾರರಿಂದ ಕೇಳಿಬರುತ್ತಿದೆ. ಈ ಬಗ್ಗೆ ಸ್ಪಷ್ಟಪಡಿಸಿರುವ ನೈಸ್ ಸಂಸ್ಥೆಯವರು, ಜೂನ್ 27ರ ಆಸುಪಾಸಿನಲ್ಲಿ ಬನ್ನೇರುಘಟ್ಟ ಹಾಗೂ ಕನಕಪುರ ರಸ್ತೆ ಮಧ್ಯದಲ್ಲಿ ನೈಸ್ ರಸ್ತೆ ಎತ್ತರಿಸುವ ಕಾಮಗಾರಿ ನಡೆಯುತ್ತಿರುವ ಸ್ಥಳದ ಬಳಿ ಎರಡು ದೊಡ್ಡ ಟ್ರಕ್ ಗಳು ಹಾಳಾಗಿ ನಿಂತಿತ್ತು. ಹಾಗಾಗಿ ಈ ಭಾಗದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಕಾಮಗಾರಿ ನಡೆಯುತ್ತಿರುವ ಸ್ಥಳದ ಪಕ್ಕದಲ್ಲಿ ಹೊಸದಾಗಿ ವಾಹನ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬೆಳಗ್ಗೆ ಮತ್ತು ಸಂಜೆಯ ಹೊತ್ತು ವಾಹನ ದಟ್ಟಣೆಯ ಅವಧಿಯಲ್ಲಿ ಹೊರತುಪಡಿಸಿದರೆ ಬೇರೆ ಅವಧಿಯಲ್ಲಿ ವಾಹನಗಳು ಎಂದಿನಂತೆ ನಿಗದಿತ ವೇಗಗತಿಯಲ್ಲಿ ಸಾಗುತ್ತದೆ ಎಂದು ಹೇಳಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ