Mysore
20
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಬದಲು ‘ಭಾರತ’ ಪದ ಬಳಕೆ ಕ್ರಮದ ಹಿಂದೆ ಎನ್‌ಡಿಎ ಕೈವಾಡವಿದೆ: ಡಿಕೆಶಿ

ಬೆಂಗಳೂರು: ಶಾಲಾ ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಎಂಬ ಹೆಸರಿನ ಬದಲು ‘ಭಾರತ’ ಎಂಬ ಹೆಸರನ್ನು ಬಳಸಬೇಕು ಎಂದು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಯು (ಎನ್‌ಸಿಇಆರ್‌ಟಿ) ರಚಿಸಿದ್ದ ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿರುವುದು ‘ತಪ್ಪು’ ಮತ್ತು ಈ ಕ್ರಮದ ಹಿಂದೆ ಎನ್‌ಡಿಎ ಕೈವಾಡವಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.

ಶಾಲಾ ಪಠ್ಯಕ್ರಮವನ್ನು ಪರಿಷ್ಕರಿಸಲು ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಎನ್‌ಸಿಇಆರ್‌ಟಿ ರಚಿಸಿದ್ದ ಉನ್ನತ ಮಟ್ಟದ ಸಮಿತಿಯು ಒಂದರಿಂದ ಹನ್ನೆರಡನೇ ತರಗತಿವರೆಗಿನ ಎಲ್ಲಾ ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಎಂಬ ಹೆಸರಿನ ಬದಲು ‘ಭಾರತ’ ಎಂದು ಬಳಸಬೇಕು ಎಂದು ಬುಧವಾರ ಶಿಫಾರಸು ಮಾಡಿದೆ.

ಪಠ್ಯಕ್ರಮದಲ್ಲಿ ‘ಪುರಾತನ ಇತಿಹಾಸ’ದ ಬದಲಿಗೆ ‘ಶಾಸ್ತ್ರೀಯ ಇತಿಹಾಸ’ವನ್ನು ಅಳವಡಿಸಬೇಕು. ಎಲ್ಲಾ ವಿಷಯಗಳಲ್ಲಿಯೂ ‘ಭಾರತೀಯ ಜ್ಞಾನ ವ್ಯವಸ್ಥೆ’ಯನ್ನು (ಐಕೆಎಸ್) ಅಳವಡಿಸಬೇಕು ಎಂಬ ಶಿಫಾರಸನ್ನು ಕೂಡ ಮಾಡಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಸಿಐ ಐಸಾಕ್ ತಿಳಿಸಿದ್ದಾರೆ.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಶಿವಕುಮಾರ್, ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಅಡ್ಮಿನಿಸ್ಟ್ರೇಷನ್ ಸರ್ವಿಸ್ ಮತ್ತು ಇಂಡಿಯನ್ ಫಾರಿನ್ ಸರ್ವಿಸ್ ಏಕೆ ಇನ್ನೂ ಇವೆ. ಇವುಗಳಲ್ಲಿ ಏಕೆ ಇನ್ನೂ ಭಾರತ ಎಂಬ ಪದವನ್ನು ಬಳಸಿಲ್ಲ. ಭಾರತೀಯ ಪಾಸ್‌ಪೋರ್ಟ್‌ನಲ್ಲಿ ‘ರಿಪಬ್ಲಿಕ್ ಆಫ್ ಇಂಡಿಯಾ’ ಎಂದು ಏಕೆ ಬರೆಯಲಾಗಿದೆ’ ಎಂದು ಪ್ರಶ್ನಿಸಿದರು.

‘ಈ ಸರ್ಕಾರಕ್ಕೆ ಏನೋ ಆಗಿದೆ ಎಂದು ನಾನು ಭಾವಿಸುತ್ತೇನೆ. ಅವರು ಭಾರತೀಯ ಯುವ ಮನಸ್ಸುಗಳನ್ನು ಏಕೆ ಗೊಂದಲಗೊಳಿಸುತ್ತಿದ್ದಾರೆಂದು ನನಗೆ ತಿಳಿದಿಲ್ಲ. ನಾವು ಭಾರತೀಯರಲ್ಲ, ಆದರೆ ನಾವು ಹೆಮ್ಮೆಯ ಇಂಡಿಯನ್ಸ್‌ ಎಂದು ಕೆಲವರು ಹೇಳುತ್ತಿದ್ದಾರೆ. ಅವರು ಯಾವುದೇ ನಿಲುವು ತಳೆದಿದ್ದರೂ ಅದು ಜನವಿರೋಧಿ, ಭಾರತ ವಿರೋಧಿ ಮತ್ತು ಇಂಡಿಯಾ ವಿರೋಧಿ ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದರು.

ಎನ್‌ಡಿಎ ಸರ್ಕಾರವು ಎನ್‌ಸಿಇಆರ್‌ಟಿಯನ್ನು ಈ ‘ನಿರ್ಧಾರ’ ತೆಗೆದುಕೊಳ್ಳುವಂತೆ ಒತ್ತಾಯಿಸಿದೆ. ಈ ಕ್ರಮವು ‘ಸಂಪೂರ್ಣ ತಪ್ಪು’ ಎಂದ ಅವರು, ಈ ಶಿಫಾರಸನ್ನು ಸ್ವೀಕರಿಸದಂತೆ ಕೇಂದ್ರಕ್ಕೆ ಮನವಿ ಮಾಡಿದರು.

‘ನೀವು ಇಂಡಿಯಾದ ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ, ನೀವು ಕಾಂಗ್ರೆಸ್‌ನ ಇತಿಹಾಸವನ್ನು ಬದಲಾಯಿಸಲು ಪ್ರಯತ್ನಿಸಿದರೂ ಅದನ್ನು ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್‌ನ ಇತಿಹಾಸವು ದೇಶದ ಇತಿಹಾಸವಾಗಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷವು ದೇಶಕ್ಕೆ ದೊಡ್ಡ ಇತಿಹಾಸವನ್ನು ನೀಡಿದೆ. ನಾವು ಭಾರತಕ್ಕೆ ಸ್ವಾತಂತ್ರ್ಯ ಪಡೆದುಕೊಂಡೆವು, ನಾವು ಅದನ್ನು ಇಂಡಿಯನ್ ಸ್ವಾತಂತ್ರ್ಯ ಎಂದು ಕರೆಯುತ್ತೇವೆ. ನಾವು ಅದನ್ನು ಭಾರತ ಸ್ವಾತಂತ್ರ್ಯ ಎಂದು ಕರೆಯುವುದಿಲ್ಲ’ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ಈ ಹಿಂದೆ ಇದ್ದದ್ದನ್ನು ಮುಂದುವರಿಸುತ್ತೇವೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸುತ್ತೇವೆ, ಯಾವುದನ್ನೂ ಬದಲಾಯಿಸುವುದಿಲ್ಲ ಎಂದು ಶಿವಕುಮಾರ್ ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ