ಬೆಂಗಳೂರು: ರಾಗಿ-ಭತ್ತದ ತಳಿಗೆ ರೈತ ಹೋರಾಟಗಾರ ದಿ. ಜಿ. ಮಾದೇಗೌಡರ ಹೆಸರಿಡಲು ಕ್ರಮ ವಹಿಸುವಂತೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಉಪ ಕುಲಪತಿಗಳಿಗೆ ಮತ್ತು ಕೃಷಿ ಇಲಾಖೆ ಕಾರ್ಯದರ್ಶಿಗಳಿಗೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಆದೇಶ ನೀಡಿದ್ದಾರೆ.
ಡಾ. ಜಿ.ಮಾದೇಗೌಡ ಪ್ರತಿಷ್ಠಾನದ 23ನೇ ವರ್ಷದ ಸಮಾಜಸೇವಾ ಮತ್ತು ಸಾವಯವ ಕೃಷಿ ಪ್ರಶಸ್ತಿ ಸಮಾರಂಭದಲ್ಲಿ ಶಾಸಕ ದಿನೇಶ್ ಗೂಳಿಗೌಡ ಅವರು ಈ ಕುರಿತು ಕೃಷಿ ಸಚಿವರ ಗಮನಕ್ಕೆ ತಂದಿದ್ದರು. ಮಾದೇಗೌಡರು 60 ವರ್ಷಗಳ ಕಾಲ ಶೈಕ್ಷಣಿಕವಾಗಿ, ರಾಜಕೀಯವಾಗಿ ಹತ್ತು ಹಲವು ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಅವರ ಹೆಸರು ಮುಂದಿನ ಪೀಳಿಗೆಗೆ ಚಿರಸ್ಥಾಯಿಯಾಗಿ ಉಳಿಯಲು ಭತ್ತ ಅಥವಾ ರಾಗಿ ತಳಿಗೆ ಅವರ ಹೆಸರನ್ನು ಇಡಬೇಕು ಎಂದು ಮನವಿ ಮಾಡಿದ್ದರು.
ಶಾಸಕರ ಮನವಿಗೆ ವೇದಿಕೆಯಲ್ಲಿಯೇ ಸ್ಪಂದಿಸಿದ ಕೃಷಿ ಸಚಿವರು, ರಾಗಿ ಅಥವಾ ಭತ್ತದ ತಳಿಗೆ ಜಿ.ಮಾದೇಗೌಡರ ಹೆಸರಿಡುವ ಬಗ್ಗೆ ಕ್ರಮ ವಹಿಸುವಂತೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಉಪ ಕುಲಪತಿಗಳಿಗೆ ಮತ್ತು ಕೃಷಿ ಇಲಾಖೆ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.