ನವದೆಹಲಿ: ನೂತನ ಸಂಸತ್ತು ಭವನದಲ್ಲಿ ಭದ್ರತಾ ಲೋಪ ಕಾಣಿಸಿಕೊಂಡಿದೆ. ಲೋಕಸಭಾ ಕಲಾಪ ನಡೆಯುತ್ತಿದ್ದ ಸಮಯದಲ್ಲಿ ಅಪರಿಚಿತ ಇಬ್ಬರು ವ್ಯಕ್ತಿಗಳು ನುಗ್ಗಿರುವ ಘಟನೆ ನಡೆದಿದೆ.
ಇದೀಗ ಆ ಅಪರಿಚಿತ ವ್ಯಕ್ತಿಗಳು ಯಾರೆಂದು ತಿಳಿದುಬಂದಿದ್ದು, ಓರ್ವ ವ್ಯಕ್ತಿ ಮೈಸೂರಿನ ವಿಜಯನಗರದ ಮೂಲದ ಮನೋರಂಜನ್ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಇನ್ನೂ ಓರ್ವ ವಿದ್ಯಾರ್ಥಿಯೂ ಸಹ ಮೈಸೂರು ಮೂಲದವನು ಎನ್ನಲಾಗುತ್ತಿದೆ. ಇವರು ಯಾತಕ್ಕಾಗಿ ಈ ರೀತಿಯ ಕೃತ್ಯ ಎಸಗಿದ ಎಂಬ ವಿಷಯ ಇನ್ನೂ ಬಯಲಾಗಬೇಕಿದೆ. ಕೈನಲ್ಲಿ ಡಬ್ಬಿ ಹಿಡಿದು ಸಂಸತ್ ಒಳನುಗ್ಗಿದ್ದ ಈತ ಅದರಿಂದ ಹಳದಿ ಹೊಗೆಯನ್ನು ಹೊರಸೂಸಿದ್ದ. ಇನ್ನು ಮೈಸೂರು ಸಂಸದರ ಅತಿಥಿ ಎಂದು ಹೇಳಿ ಸಂಸತ್ ಪ್ರವೇಶಿಸಿದ್ದ ಎಂದು ತಿಳಿದುಬಂದಿದೆ. ಡಿಸೆಂಬರ್ 12ರಂದು ಸಂಸದ ಪ್ರತಾಪ್ ಸಿಂಹ ಕಚೇರಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಪಾಸ್ ಪಡೆದಿದ್ದರು ಎಂದು ತಿಳಿದುಬಂದಿದೆ. ಸಾಗರ್ ಶರ್ಮಾ ಹೆಸರಿನಲ್ಲಿ ಪಾಸ್ ಪಡೆದಿದ್ದರು.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಮನೋರಂಜನ್ ತಂದೆ ದೇವರಾಜೇಗೌಡ ಇಂತಹ ಕೃತ್ಯ ಎಸಗಿದವರು ಯಾರೇ ಆದರೂ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಅದು ತನ್ನ ಮಗನಾಗಿದ್ದರೂ ಕಠಿಣ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.
ಈ ಇಬ್ಬರು ಮಾತ್ರವಲ್ಲದೇ ಹೊರಗಡೆ ಸಹ ಇಬ್ಬರು ಅಂತಹದ್ದೇ ಹೊಗೆಯನ್ನು ಸೂಸಿ ಪ್ರತಿಭಟನೆ ನಡೆಸುತ್ತಿದ್ದರು ಹಾಗೂ ಅವರನ್ನೂ ಸಹ ಬಂಧಿಸಲಾಗಿದೆ. ಸದ್ಯ ನಾಲ್ವರು ಬಂಧಿತರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಅವರ ಹಿನ್ನೆಲೆಯನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ. ಇದರ ಹಿಂದೆ ಯಾವುದಾದರೂ ಸಂಘಟನೆಗಳ ಕೈವಾಡವಿದೆಯಾ, ಯಾರ ಮೇಲಾದರೂ ವೈಯಕ್ತಿಕ ದ್ವೇಷವಿತ್ತಾ ಎಂಬ ಅನುಮಾನಗಳಿಗೆ ವಿಚಾರಣೆಯಲ್ಲಿ ಉತ್ತರ ಸಿಗಬೇಕಿದೆ.





