Mysore
19
few clouds
Light
Dark

ರೇವಣ್ಣ ಕುಟುಂಬವನ್ನು ಶಾಶ್ವತವಾಗಿ ರಾಜಕೀಯದಿಂದ ತೆಗೆಯುವುದೇ ನನ್ನ ಗುರಿ : ದೇವರಾಜೇಗೌಡ

ಹಾಸನ : ಪ್ರಜ್ವಲ್‌ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಹೈಕೋರ್ಟ್‌ ಅನರ್ಹಗೊಳಿಸಿರುವುದು ಸತ್ಯಕ್ಕೆ ಸಂದ ಜಯ. ಹೆಚ್‌.ಡಿ. ರೇವಣ್ಣ ಅವರ ಕುಟುಂಬವನ್ನು ರಾಜಕೀಯದಿಂದ ಶಾಶ್ವತವಾಗಿ ತೆಗೆಯಬೇಕು ಎಂಬುದೇ ನನ್ನ ಗುರಿ ಎಂದು ದೂರುದಾರ ಮತ್ತು ವಕೀಲ ದೇವರಾಜೇಗೌಡ ಹೇಳಿದ್ದಾರೆ.

ಇದು ಸಾಮಾನ್ಯ ಹಾಗೂ ಪ್ರಾಮಾಣಿಕ ವಕೀಲನಿಗೆ ಸಿಕ್ಕಿ ಜಯ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಇದುವರೆಗೂ ಬಂದ ಆಮಿಷಗಳಿಗೆ ಒಳಗಾಗಲಿಲ್ಲ. ಬೆದರಿಕೆಗೂ ಹೆದರಲಿಲ್ಲ. ಇದೆಲ್ಲದರ ನಡುವೆ ಪ್ರಜ್ವಲ್‌ ರೇವಣ್ಣ ಅವರ ಅಪರಾಧಗಳ ಬಗ್ಗೆ ಸೂಕ್ತ ದಾಖಲಾತಿಗಳೊಂದಿಗೆ ನ್ಯಾಯಾಲಯದ ಮೊರೆ ಹೋಗಿದ್ದೆ. ನ್ಯಾಯಾಲಯದ ಮೇಲೆ ಅಪಾರ ವಿಶ್ವಾಸ ಇತ್ತು. ಯಾರೇ ತಪ್ಪು ಮಾಡಿದ್ದರೂ ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತದೆ ಎಂದು ನಾನು ಅರ್ಜಿ ಸಲ್ಲಿಸಿದ್ದೆ. ಅಪರಾಧ ಸಾಬೀತಾದ ಹಿನ್ನೆಲೆ ಸಂಸದ ಸ್ಥಾನದಿಂದ ಪ್ರಜ್ವಲ್‌ ರೇವಣ್ಣರನ್ನು ಅನರ್ಹಗೊಳಿಸಿ ಕೋರ್ಟ್‌ ತೀರ್ಪು ನೀಡಿದೆ ಎಂದು ತಿಳಿಸಿದರು.

23 ಕೋಟಿ ಆಸ್ತಿ ವಿಚಾರ ಮುಚ್ಚಿಟ್ಟಿದ್ದರು. ಬ್ಯಾಂಕ್‌ ಬ್ಯಾಲೆನ್ಸ್‌ ವಿವರವನ್ನೂ ತಪ್ಪು ಕೊಟ್ಟಿದ್ದರು. ಆದಾಯ ತೆರಿಗೆ ಸರಿಯಾಗಿ ಕಟ್ಟದೇ ಸರ್ಕಾರಕ್ಕೆ ವಂಚನೆ ಮಾಡಿದ್ದರು. ಇದೆಲ್ಲವನ್ನು ನಾವು ಸಾಬೀತುಪಡಿಸಿದ್ದೇವೆ. ಅಷ್ಟೇ ಅಲ್ಲದೇ ಚುನಾವಣಾ ಸಂದರ್ಭದಲ್ಲಿ ಪ್ರಜ್ವಲ್‌ ರೇವಣ್ಣ ಪರವಾಗಿ ಅವರ ತಂದೆ 200 ಕ್ಕೂ ಹೆಚ್ಚು ಕಳ್ಳ ವೋಟುಗಳನ್ನು ಹಾಕಿಸಿದ್ದರು. ಅವರು ಜನರಿಗೆ ಹಣ ಹಂಚುವ ದೃಶ್ಯವೂ ಸೆರೆಯಾಗಿತ್ತು. ಇದರ ವಿರುದ್ಧ ಎಫ್‌ಐಆರ್‌ ಕೂಡ ದಾಖಲಾಗಿತ್ತು. ಬಾವಿಕೆರೆ ಗ್ರಾಮದಲ್ಲಿ ಸರ್ಕಾರಿ ಜಾಗವನ್ನು ರಿಜಿಸ್ಟರ್‌ ಮಾಡಿಕೊಂಡಿದ್ದರು. ನಾವು ಮಾಡಿದ ಎಲ್ಲಾ ಆರೋಪಗಳಿಗೂ ಪೂರಕ ದಾಖಲಾತಿಗಳನ್ನು ಒದಗಿಸಿ ಸಾಬೀತುಪಡಿಸಿದ್ದೆವು. ನಮ್ಮ ಹೋರಾಟಕ್ಕೆ ಮತ್ತು ಸತ್ಯಕ್ಕೆ ಜಯ ಸಿಕ್ಕಿದೆ. ಚುನಾವಣೆಯಲ್ಲಿ ನಿಲ್ಲಬೇಕಾದ ವ್ಯಕ್ತಿ ಸ್ವಚ್ಛವಾಗಿ ಇರಬೇಕು ಎಂಬ ಸಂದೇಶವನ್ನು ಕೋರ್ಟ್‌ ತನ್ನ ತೀರ್ಪಿನ ಮೂಲಕ ನೀಡಿದೆ ಎಂದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ