Mysore
21
broken clouds

Social Media

ಗುರುವಾರ, 01 ಜನವರಿ 2026
Light
Dark

ಟ್ವಿಟ್ಟರ್ ಬಳಕೆದಾರರಿಗೆ ಮತ್ತೊಂದು ಶಾಕ್ ಕೊಟ್ಟ ಮಸ್ಕ್: ಶೀಘ್ರವೇ ಎಕ್ಸ್‌ ಆಪ್ ಪರಿಚಯ

ನವದೆಹಲಿ : ಟ್ವಿಟ್ಟರ್ ಬಳಕೆದಾರರಿಗೆ ಉದ್ಯಮಿ ಹಾಗೂ ಟ್ವಿಟ್ಟರ್ ಸಂಸ್ಥೆ ಮುಖ್ಯಸ್ಥ ಎಲಾನ್ ಮಸ್ಕ್ ಮತ್ತೊಂದು ಶಾಕ್ ನೀಡಿದ್ದಾರೆ. ಚೀನಾದ ‘ವಿ ಚಾಟ್’ ರೀತಿ ‘ಸೂಪರ್ ಆಪ್’ ಸೃಷ್ಟಿಸುವ ಬಗ್ಗೆ ಅನೇಕ ಬಾರಿ ಪ್ರಸ್ತಾಪಿಸಿದ್ದ ಅವರು, ಟ್ವಿಟ್ಟರ್ ತಾಣವನ್ನು ರೀಬ್ರ್ಯಾಂಡ್ ಮಾಡುವ ಯೋಜನೆ ಇದೆ ಎಂಬ ಬಾಂಬ್ ಸಿಡಿಸಿದ್ದಾರೆ.

“ಶೀಘ್ರದಲ್ಲಿಯೇ ಟ್ವಿಟ್ಟರ್ ಬ್ರ್ಯಾಂಡ್‌ಗೆ ಮತ್ತು ಎಲ್ಲಾ ಹಕ್ಕಿಗಳಿಗೆ ಕ್ರಮೇಣವಾಗಿ ನಾವು ವಿದಾಯ ಹೇಳಬೇಕಿದೆ” ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.

ಅಲ್ಲದೆ, ತಮ್ಮ ಕನಸಿನ ‘ಎಕ್ಸ್’ ಆಪ್ ಬಗ್ಗೆಯೂ ಅವರು ಪ್ರಸ್ತಾಪ ಮಾಡಿದ್ದಾರೆ. ಈ ಆಪ್ ಜನರು ತಮ್ಮ ಅನಿಸಿಕೆಗಳನ್ನು ಜಗತ್ತಿನ ಜತೆ ಹಂಚಿಕೊಳ್ಳಲು ಇರುವ ವೇದಿಕೆಗಳಿಗಿಂತಲೂ ವಿಭಿನ್ನ ಹಾಗೂ ದೊಡ್ಡದು ಎಂದು ಅವರು ಹೇಳಿಕೊಂಡಿದ್ದರು.

“ಇಂದು ರಾತ್ರಿ ಸಾಕಷ್ಟು ಉತ್ತಮ ಎನ್ನಬಹುದಾದ ‍X ಲೋಗೋ ದೊರೆತರೆ, ನಾಳೆಯೇ ನಾವು ಜಗತ್ತಿನಾದ್ಯಂತ ಲೈವ್ ಹೋಗಲಿದ್ದೇವೆ” ಎಂದು ಎಕ್ಸ್‌ ಆಪ್ ಶೀಘ್ರವೇ ಕಾರ್ಯಾಚರಣೆ ನಡೆಸಲಿದೆ ಎಂಬುದಾಗಿ ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ನೀಲಿ ಹಕ್ಕಿಯನ್ನು ಚಿತ್ರಿಸುವ ತನ್ನ ಲೋಗೋ, “ನಮ್ಮ ಬಹಳ ಅಮೂಲ್ಯವಾದ ಆಸ್ತಿ. ಹೀಗಾಗಿ ನಾವು ಅದರ ಬಗ್ಗೆ ಅಪಾರ ಕಾಳಜಿ ಹೊಂದಿದ್ದೇವೆ” ಎಂಬುದಾಗಿ ಟ್ವಿಟರ್ ವೆಬ್‌ಸೈಟ್‌ನಲ್ಲಿ ಹೇಳಿದೆ.

ಏಪ್ರಿಲ್‌ನಲ್ಲಿ ಡೊಗೆಕಾಯಿನ್ ಶಿಬಾ ಇನು ನಾಯಿಯ ಚಿತ್ರದೊಂದಿಗೆ ಟ್ವಿಟರ್‌ನ ಹಕ್ಕಿ ಚಿತ್ರವನ್ನು ತಾತ್ಕಾಲಿಕವಾಗಿ ಬದಲಿಸಲಾಗಿತ್ತು. ಇದರಿಂದ ಮೀಮ್ ಕಾಯಿನ್ ಮಾರ್ಕೆಟ್ ಮೌಲ್ಯಕ್ಕೆ 4 ಬಿಲಿಯನ್ ಡಾಲರ್‌ನಷ್ಟು ಹಣ ದೊಕಲು ನೆರವಾಗಿತ್ತು.

ತಮ್ಮ ಸೂಪರ್ ಆಪ್‌ಗೆ ‘ಎಕ್ಸ್’ ಎಂಬ ಹೆಸರು ಇಡುವ ಬಗ್ಗೆ ಎಲಾನ್ ಮಸ್ಕ್ ಕೆಲವು ಸಮಯದಿಂದ ಹಲವು ಬಾರಿ ಪ್ರಸ್ತಾಪಿಸಿದ್ದರು. ಏಪ್ರಿಲ್‌ನಲ್ಲಿ ನೂತನ ಸಿಇಒ ಲಿಂಡಾ ಯಾಕ್ಕರಿನೊ ಅವರನ್ನು ಸ್ವಾಗತಿಸಿ ಟ್ವೀಟ್ ಮಾಡಿದ್ದ ಮಸ್ಕ್, “ಈ ವೇದಿಕೆಯನ್ನು ಪ್ರತಿಯೊಂದರ ಆಪ್ ಎಕ್ಸ್ ಆಗಿ ಪರಿವರ್ತಿಸಲು ಲಿಂಡಾ ಜತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದರು.

“ಟ್ವಿಟ್ಟರ್ ಖರೀದಿಯು ಎಕ್ಸ್ ಸೃಷ್ಟಿಯ ವೇಗವರ್ಧಕವಾಗಿದೆ” ಎಂದು ಕಳೆದ ಅಕ್ಟೋಬರ್‌ನಲ್ಲಿ ಮಸ್ಕ್ ಟ್ವೀಟ್ ಮಾಡಿದ್ದರು.

ಟೆಸ್ಲಾ ಉದ್ಯಮಿ ಮಸ್ಕ್ ಅವರು ಸಾಮಾಜಿಕ ಜಾಲತಾಣವನ್ನು ಕಳೆದ ವರ್ಷ ಖರೀದಿಸಿದ ಬೆನ್ನಲ್ಲೇ ನೂರಾರು ಸಿಬ್ಬಂದಿಯನ್ನು ಕೆಲಸದಿಂದ ಕಿತ್ತು ಹಾಕಿದ್ದರು. ಆಗಿನಿಂದಲೂ ಟ್ವಿಟ್ಟರ್ ನಿರಂತರವಾಗಿ ತಾಂತ್ರಿಕ ಲೋಪಗಳನ್ನು ಎದುರಿಸುತ್ತಾ ಬಂದಿದೆ. ಅದರ ಜಾಹೀರಾತು ಆದಾಯವು ಸತತವಾಗಿ ಇಳಿಕೆಯಾಗುತ್ತಿದೆ. ವೇದಿಕೆಯನ್ನು ಉಳಿಸಲು ಟ್ವಿಟ್ಟರ್ ಕೆಲವು ಕೊನೆಯ ಹಂತದ ಪ್ರಯತ್ನಗಳನ್ನು ನಡೆಸುತ್ತಿದೆ.

ಒಂದೆಡೆ ಹಣ ಕಳೆದುಕೊಳ್ಳುತ್ತಿದ್ದರೂ, ಜಾಹೀರಾತಿಗೆ ಪರ್ಯಾಯವಾಗಿ ಬೇರೆ ಆದಾಯದ ಮೂಲಕ್ಕಾಗಿ ವಿಭಿನ್ನ ಉದ್ಯಮ ಮಾದರಿಯೊಂದಿಗೆ ಬರಲು ಪ್ರಯತ್ನಿಸುತ್ತಿದೆ. ಕಂಪೆನಿಯ ಟ್ವಿಟ್ಟರ್ ಬ್ಲೂ ಪ್ರೀಮಿಯಂ ಚಂದಾದಾರಿಕೆಗೆ ತಿಂಗಳಿಗೆ 8 ಡಾಲರ್ ನೀಡಬೇಕಿದೆ. ಇದರಿಂದ ಕಂಪೆನಿಗೆ ಕೊಂಚ ಲಾಭ ಬರುತ್ತಿದೆ. ಕೆಲವು ಟ್ವಿಟ್ಟರ್ ಬ್ಲೂ ಚಂದಾದಾರರಿಗೆ, ಅವರ ಟ್ವೀಟ್‌ಗಳಿಗೆ ಬರುವ ಸ್ಪಂದನೆಯ ಆಧಾರದಲ್ಲಿ ಜಾಹೀರಾತು ಆದಾಯವನ್ನು ಹಂಚಿಕೆ ಮಾಡುವುದನ್ನು ಕಂಪೆನಿ ಈ ತಿಂಗಳು ಆರಂಭಿಸಿದೆ. ಈ ರೀತಿ ಹಣ ಪಡೆದ ಖಾತೆಗಳು ಹೆಚ್ಚಾಗಿ ಸ್ವತಃ ಮಸ್ಕ್‌ ಜತೆಗೆ ಸಂವಾದ ನಡೆಸುವವರದ್ದೇ ಆಗಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!