ಚೆನ್ನೈ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಅಚ್ಚರಿಯಂಬಂತೆ ಸಿಎಸ್‌ಕೆ (ಚೆನ್ನೈ ಸೂಪರ್ ಕಿಂಗ್ಸ್) ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ.
ಯುವ ಬ್ಯಾಟರ್ ಸಿಎಸ್‌ಕೆ ತಂಡದ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಅವರು ಐಪಿಎಲ್ ಸೀಸನ್ 17ರ ಸಿಎಸ್‌ಕೆ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ.
ಚೆನ್ನೈ ತಂಡವನ್ನು ಐಪಿಎಲ್‌ನಲ್ಲಿ ಧೋನಿ ಐದು ಬಾರಿ ಚಾಂಪಿಯನ್ ಮಾಡಿದ್ದರು. ಧೋನಿ ನಾಯಕತ್ವದಲ್ಲಿ ಚೆನ್ನೈ 2010, 2011, 2018, 2021 ಮತ್ತು 2023ರಲ್ಲಿ ಚಾಂಪಿಯನ್ ಆಗಿದಲ್ಲದೆ, 2008, 2012, 2013, 2015 ಮತ್ತು 2019 ರಲ್ಲಿ ರನ್ನರ್ಅಪ್ ಆಗಿತ್ತು.
ಐಪಿಎಲ್ ಆರಂಭಕ್ಕೆ ಒಂದೇ ದಿನ ಬಾಕಿ ಇರುವಾಗಲೇ ನಾಯಕ ಧೋನಿ ತಮ್ಮ ಕ್ಯಾಪ್ಟನ್ ಪಟ್ಟವನ್ನು ತ್ಯಜಿಸಿದ್ದು, ಅವರ ಟ್ವೀಟ್ ಸದ್ಯ ವೈರಲ್ ಆಗುತ್ತಿದೆ. ಕೆಲ ದಿನಗಳ ಹಿಂದೆ ತಾವು ಹೊಸ ಸೀಸನ್ ಮತ್ತು ಹೊಸ ಜವಾಬ್ದಾರಿಯೊಂದಿಗೆ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುವುದಾಗಿ ಈ ಹಿಂದೆ ಟ್ವೀಟ್ ಮಾಡಿದ್ದರು.
ಕಳೆದ ಸೀಸನ್‌ನಲ್ಲಿ ಮಂಡಿ ನೋವಿನಿಂದ ಬಳಲುತ್ತಿದ್ದ ಧೋನಿ ಈ ಸೀಸನ್ ಆಡಲಿದ್ದಾರೆಯೇ ಎಂದು ಅನುಮಾನ ಮೂಡಿತ್ತು. ಅವೆಲ್ಲವನ್ನು ಸುಳ್ಳು ಮಾಡಿದ್ದ ಧೋನಿ ಈ ಸೀಸನ್ ಎಂಟ್ರಿ ಕೊಟ್ಟು ಭರ್ಜರಿ ತಯಾರಿ ಆರಂಭಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ಆದರೆ, ಈಗ ದಿಢೀರ್ ನಾಯಕತ್ವ ತೊರೆದಿರುವುದು ಅಭಿಮಾನಿಗಳಿಗೆ ಕೊಂಚ ನಿರಾಸೆ ಮೂಡಿಸಿದೆ.
ಪ್ರತಿ ಸೀಸನ್‌ನಂತೆ ಈ ಸೀಸನ್ನಲ್ಲಿಯೂ ಎಲ್ಲಾ 10 ತಂಡಗಳ ನಾಯಕರು ಫೋಟೋಶೂಟ್‌ಗೆ ಬಂದಿದ್ದರು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ ಎಂಎಸ್ ಧೋನಿ ಬದಲಿಗೆ ಋತುರಾಜ್ ಕಾಣಿಸಿಕೊಂಡಿದ್ದರು. ಇದೀಗ ಸಿಎಸ್‌ಕೆ ತಂಡಕ್ಕೆ ಋತುರಾಜ್ ನಾಯಕರಾಗಿ ಘೋಷಣೆಯಾಗಿದ್ದು, ಈ ಕುರಿತು ಫ್ರಾಂಚೈಸಿ ಕೂಡ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.