Mysore
22
broken clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಉನ್ನತ ಮಟ್ಟದ ಸಲಹಾ ಸಮಿತಿ ಸದಸ್ಯರಾಗಿ ಸಂಸದೆ ಸುಮಲತಾ ನೇಮಕ

ಮಂಡ್ಯ : ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರವಾದವನ್ನು ಎದುರಿಸಲು ಉನ್ನತ ಮಟ್ಟದ ಸಲಹಾ ಸಮಿತಿಯ ಸದಸ್ಯರಾಗಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.

ಈ ಉನ್ನತ ಮಟ್ಟದ ಸಲಹಾ ಸಮಿತಿಯು ಭಯೋತ್ಪಾದನೆ ನಿಗ್ರಹ ಪ್ರಯತ್ನಗಳಿಗೆ ಸಂಬಂಧಿಸಿದ ಸಂಸದೀಯ ಚಟುವಟಿಕೆಗಳಿಗೆ ಜಾಗತಿಕ ಕೇಂದ್ರ ಬಿಂದುವಾಗಿ ಮತ್ತು ವಿವಿಧ ದೇಶಗಳ ಸಂಸತ್ತಿನ ಸದಸ್ಯರಿಂದ ಕೂಡಿದೆ. ಇದರ ಜತೆಗೆ, ಹವಾಮಾನ ಬದಲಾವಣೆ, ಸಮಾಜದಲ್ಲಿ ಮತ್ತು ಸಂಸತ್ತಿನಲ್ಲಿ ಮಹಿಳಾ ಸಬಲೀಕರಣ ಮತ್ತು ಅನಾಥ ಮಕ್ಕಳ ಕಳ್ಳ ಸಾಗಣೆ ತಡೆಗಟ್ಟುವಿಕೆ ಸಂಬಂಧದ ಚರ್ಚೆಗಳಲ್ಲಿ ಸುಮಲತಾ ಭಾಗವಹಿಸಿದ್ದಾರೆ.

ಸುಮಲತಾ ಅವರು ಈ ಉನ್ನತ ಮಟ್ಟದ ಸಮಿತಿಗೆ ನಾಮನಿರ್ದೇಶನಗೊಂಡ ಮೊದಲ ಭಾರತೀಯ ಸಂಸತ್ತಿನ ಸದಸ್ಯರಾಗಿದ್ದು, ಐದು ವರ್ಷಗಳ ಅವಧಿಗೆ ಸದಸ್ಯರಾಗಿರುತ್ತಾರೆ.

ಅ. ೨೩ ರಿಂದ ೨೭ರವರೆಗೆ ಅಂಗೋಲಾದ ಲುವಾಂಡಾದಲ್ಲಿ ನಡೆಯುತ್ತಿರುವ ಇಂಟರ್ ಪಾರ್ಲಿಮೆಂಟರಿ ಯೂನಿಯನ್ ಶೃಂಗಸಭೆಗೆ ಸ್ಪೀಕರ್ ಜತೆಗಿನ ನಿಯೋಗದ ಭಾಗವಾಗಿ ಸುಮಲತಾ ಭಾಗವಹಿಸಿದ್ದು, ನಾಮನಿರ್ದೇಶನ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಈ ಶೃಂಗಸಭೆಯ ಭಾಗವಾಗಿ, ಸುಮಲತಾ ಅವರು ಹಲವಾರು ಇತರೆ ದೇಶಗಳ ಸಂಸದರೊಂದಿಗೆ ಹಲವಾರು ವಿಷಯಗಳ ಕುರಿತು ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದ್ದು, ಜಾಗತಿಕ ಸಂಸದರ ನಡುವಿನ ಇಂತಹ ಸಂವಾದವು ಜಗತ್ತು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಪ್ರಧಾನ ಮಂತ್ರಿಗಳ ಕನಸಿನ ಯೋಜನೆಯಾದ `ವಿಕ್ಷಿತ್ ಭಾರತ್ ೨೦೪೭’ರ ದೃಷ್ಟಿಕೋನವನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತದೆ ಎಂದು ಸುಮಲತಾ ಅಂಬರೀಶ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!