ಬೆಂಗಳೂರು : ಬೆಂಗಳೂರಿನಲ್ಲಿ ಆರಂಭವಾಗಿರುವ ಪ್ರಧಾನಿ ಮೋದಿ ಅವರ ಮೆಗಾ ರೋಡ್ ಶೋ ವೀಕ್ಷಣೆ ಮಾಡಲು ವಿದೇಶಿ ಅಧಿಕಾರಿಗಳು ಸಹ ಜಮಾಯಿಸಿದ್ದಾರೆ.
ಹನ್ನೊಂದು ಮಂದಿ ವಿದೇಶಿ ಅಧಿಕಾರಿಗಳ ತಂಡ ಸೌತ್ ಎಂಡ್ ಸರ್ಕಲ್ ಬಳಿ ಮೋದಿಯನ್ನು ನೋಡಲು ಬಂದಿದ್ದಾರೆ. ಮಾಲ್ಡೀವ್ಸ್, ಭೂತಾನ್, ನೇಪಾಳ ದೇಶದ ಅಧಿಕಾರಿಗಳು ಚುನಾವಣಾ ತರಬೇತಿಗಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ಕರ್ನಾಟಕದಲ್ಲಿನ ಪೊಲೀಸ್ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆಯಲು ಅಧಿಕಾರಿಗಳು ಬಂದಿದ್ದಾರೆ.
ಒಟ್ಟು ಹನ್ನೊಂದು ಮಂದಿಯ ಅಧಿಕಾರಿಗಳ ತಂಡ ಆಗಮಿಸಿದ್ದು, ಪ್ರಧಾನಿ ಮೋದಿ ರೋಡ್ ಶೋ ನೋಡಲು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಅನುಮತಿಯನ್ನು ಪಡೆದು ಸೌತ್ ಎಂಡ್ ಸರ್ಕಲ್ಗೆ ಬಂದಿದ್ದಾರೆ.
ಬೆಂಗಳೂರಿನ ಜೆಪಿ ನಗರದ ಸೋಮೇಶ್ವರ ಸಭಾಭವನದಿಂದ ಪ್ರಧಾನಿ ಮೋದಿ ಅವರ ಬೃಹತ್ ರೋಡ್ ಶೋ ಆರಂಭವಾಗಿದೆ. ತೆರೆದ ವಾಹನ ಏರಿರುವ ಪ್ರಧಾನಿ ಮೋದಿ ದಾರಿಯುದ್ದಕ್ಕೂ ಜನರತ್ತ ಕೈ ಬೀಸುತ್ತಾ ಸಾಗುತ್ತಿದ್ದಾರೆ. ರಸ್ತೆಯ ಎರಡು ಬದಿಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದು, ನೆಚ್ಚಿನ ಪ್ರಧಾನಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಅಲ್ಲದೆ, ಪ್ರಧಾನಿಗೆ ಹೂಮಳೆ ಸುರಿಯುತ್ತಿದ್ದಾರೆ.
ಸಂಚಾರ ಬಂದ್ : ಬೆಳಗ್ಗೆ 10 ಗಂಟೆಗೆ ಆರಂಭವಾಗಿರುವ ರೋಡ್ ಶೋ ಮಧ್ಯಾಹ್ನ 1 ಗಂಟೆಗೆ ಮುಕ್ತಾಯವಾಗಲಿದೆ. ಹೀಗಾಗಿ ಈ ಕೆಳಕಂಡ ರಸ್ತೆಗಳಲ್ಲಿ ಸಂಚರಿಸದೇ ಪರ್ಯಾಯ ರಸ್ತೆಗಳನ್ನು ಬಳಸುವಂತೆ ಸಾರ್ವಜನಿಕರಿಗೆ ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ. ರಾಜಭವನ ರಸ್ತೆ, ರಮಣ ಮಹರ್ಷಿ ರಸ್ತೆ, ಮೇಖ್ರಿ ವೃತ್ತ, ಆರ್ಬಿಐ ಲೇಔಟ್, ಜೆ.ಪಿ. ನಗರ, ರೋಸ್ ಗಾರ್ಡನ್, ಜೆ.ಪಿ. ನಗರ, ಸಿರ್ಸಿ ಸರ್ಕಲ್, ಜೆ.ಜೆ. ನಗರ, ಬಿನ್ನಿಮಿಲ್ ರಸ್ತೆ, ಶಾಲಿನಿ ಮೈದಾನ, ಸೌತ್ ಎಂಡ್ ರಸ್ತೆ, ಆಮುಗಂ ಸರ್ಕಲ್, ಬುಲ್ ಟೆಂಪಲ್ ರಸ್ತೆ, ರಾಮಕೃಷ್ಣಾಶ್ರಮ, ಉಮಾ ಟಾಕೀಸ್, ಟಿ.ಆರ್. ಮಿಲ್, ಚಾಮರಾಜಪೇಟೆ ಮುಖ್ಯ ರಸ್ತೆ, ಬಾಳೇಕಾಯಿ ಮಂಡಿ, ಕೆ.ಪಿ. ಅಗ್ರಹಾರ, ಮಾಗಡಿ ಮುಖ್ಯರಸ್ತೆ, ಚೋಳೂರುಪಾಳ್ಯ, ಎಂ.ಸಿ. ವೃತ್ತ, ಪಶ್ಚಿಮ ಕಾರ್ಡ್ ರಸ್ತೆ, ಎಂ.ಸಿ. ಲೇಔಟ್, ನಾಗರಬಾವಿ ಮುಖ್ಯರಸ್ತೆ, ಬಿಜಿಎಸ್ ಮೈದಾನ, ಹಾವನೂರು ಸರ್ಕಲ್, ಬಸವೇಶ್ವರನಗರ 8ನೇ ಮುಖ್ಯರಸ್ತೆ ಮತ್ತು 15ನೇ ಮುಖ್ಯರಸ್ತೆ, ಶಂಕರಮಠ, ಮೋದಿ ಆಸ್ಪತ್ರೆ ರಸ್ತೆ, ನವರಂಗ್ ವೃತ್ತ, ಎಂಕೆಕೆ ರಸ್ತೆ, ಮಲ್ಲೇಶ್ವರ ಸರ್ಕಲ್, ಸಂಪಿಗೆ ರಸ್ತೆ ಮತ್ತು ಸ್ಯಾಂಕಿ ರಸ್ತೆ ಬಳಸದಂತೆ ಸಂಚಾರ ಪೊಲೀಸರು ತಿಳಿಸಿದ್ದಾರೆ.





