Mysore
17
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಕರ್ನಾಟಕದ ಮಾದರಿಯನ್ನು ಇತರ ರಾಜ್ಯಗಳಲ್ಲೂ ಅಳವಡಿಸಿಕೊಳ್ಳಬೇಕು : ಶರದ್ ಪವಾರ್

ಮುಂಬೈ : ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಅನ್ಯ ರಾಜ್ಯಗಳ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಾಷ್ಟ್ರ ಮಟ್ಟದ ಚುನಾವಣೆಯಲ್ಲೂ ಪ್ರಭಾವ ಬೀರಬಹುದು ಎಂಬ ವಿಶ್ಲೇಷಣೆ ಶುರುವಾಗಿದೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು, ಸಿಪಿಐ ನಾಯಕ ಡಿ. ರಾಜಾ ಅವರೊಂದಿಗೆ ಮಾತುಕತೆ ನಡೆಸಿ, ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಚರ್ಚಿಸಿದ್ದಾರೆ.

ಬಿಜೆಪಿಗೆ ಪರ್ಯಾಯ ನಾಯಕತ್ವ ನೀಡುವ ಬಗ್ಗೆ ಉಭಯ ನಾಯಕರು ಚರ್ಚಿಸಿದ್ದಾರೆ. ಬಳಿಕ ಮಾತನಾಡಿದ ಶರದ್ ಪವಾರ್, ‘ಕರ್ನಾಟಕದ ಮಾದರಿಯನ್ನು ಇತರ ರಾಜ್ಯಗಳಲ್ಲಿ ಜಾರಿಗೊಳಿಸುವ ಅಗತ್ಯವಿದೆ ಮತ್ತು ಅದಕ್ಕಾಗಿ ಸಮಾನ ಮನಸ್ಕ ಪಕ್ಷಗಳು ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಲು ಶ್ರಮಿಸಬೇಕು’ ಎಂದಿದ್ದಾರೆ.
ಇನ್ನು ಮುಂದುವರೆದು ಮಾತನಾಡುತ್ತಾ, ಕರ್ನಾಟಕ ವಿಧಾನಸಭಾ ಚುನಾವಣೆ ಸ್ಪಷ್ಟ ಸಂದೇಶ ನೀಡಿದೆ. ಇತರ ರಾಜ್ಯಗಳಲ್ಲಿ ಬಿಜೆಪಿಯನ್ನು ಮಣಿಸಲು, ಕರ್ನಾಟಕದ ಮಾದರಿಯನ್ನು ಅಳವಡಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಸಮಾನ ಮನಸ್ಕ ಪಕ್ಷಗಳು ಸಮಾನ ಕನಿಷ್ಠ ಯೋಜನೆಯನ್ನು ರಚಿಸಿಕೊಳ್ಳಬೇಕು. ಈ ದೆಸೆಯಲ್ಲಿ ನಾವು ಒಟ್ಟಾಗಿ ಕೆಲಸ ಮಾಡಲಿದ್ದೇವೆ’ ಎಂದು ಹೇಳಿದ್ದಾರೆ.

ಬಿಜೆಪಿ ಸೋಲಿನ ಬಗ್ಗೆ ಮಾತನಾಡಿದ ರಾಜಾ, ‘ರಾಜ್ಯ ಮಟ್ಟದ ತಂತ್ರಗಾರಿಕೆ ಕೆಲಸ ಮಾಡುವುದಿಲ್ಲ. ದೆಹಲಿ ಮಟ್ಟದಲ್ಲಿ ನಾವು ಸಮಾಲೋಚನೆ ನಡೆಸಲಿದ್ದೇವೆ. 2024 ರ ಲೋಕಸಭಾ ಚುನಾವಣೆಯಲ್ಲಿಯೂ ಇದೇ ರೀತಿಯ ಫಲಿತಾಂಶ ಪುನಾರಾವರ್ತನೆ ಆಗಲಿದೆ’ ಎಂದರು.

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಹೊರ ಬಿದ್ದು, ಕಾಂಗ್ರೆಸ್ ಸಂಪೂರ್ಣ ಬಹುಮತದೊಂದಿದೆ ಅಧಿಕಾರದ ಗದ್ದುಗೆ ಏರಿದೆ. ಈ ಫಲಿತಾಂಶ ಇತರ ರಾಜ್ಯಗಳ ನಾಯಕರ ನಡುವೆಯೂ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್‌ಗೆ ಇದು ಶುಭಾರಂಭ ಎನ್ನುವ ಹಾಗೆ ಬಿಂಬಿಸಲಾಗುತ್ತಿದೆ. ಸಿಪಿಐ ನಾಯಕ ಡಿ ರಾಜಾ, ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು, ಅವರ ಮುಂಬೈ ನಿವಾಸದಲ್ಲಿ ಭೇಟಿಯಾಗಿ, ಬಿಜೆಪಿಗೆ ಪರ್ಯಾಯ ನೀಡುವ ಬಗ್ಗೆ ಚರ್ಚಿಸಿದ್ದಾರೆ.

ಬಿಜೆಪಿ ವಿರುದ್ಧ ಮಹಾಮೈತ್ರಿ : 2024 ರ ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ, ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಮಹಾಮೈತ್ರಿ ರೂಪಿಸಲು ಸಜ್ಜಾಗಿವೆ. ಬಿಹಾರ ಸಿಎಂ ನಿತೀಶ್ ಕುಮಾರ್ ಒಕ್ಕೂಟದ ಮುಂದಾಳತ್ವ ವಹಿಸಿದ್ದಾರೆ. ಬಿಜೆಪಿ ವಿರುದ್ಧ ರಣತಂತ್ರ ಹೆಣೆಯಲು, ಎನ್‌ಸಿಪಿ ವರಿಷ್ಠ ಪವಾರ್, ಕೈ ನಾಯಕರ ಜೊತೆಗ ಸಮಾಲೋಚನೆ ನಡೆಸಿದ್ದರು. ಸಮಾನ ಮನಸ್ಕ ಪಕ್ಷಗಳು ಒಗ್ಗೂಡಬೇಕೆಂಬ ಮಾತು ಮೊದಲಿನಿಂದಲೂ ಕೇಳಿ ಬರುತ್ತಿತ್ತು. ಇದೀಗ ಶರದ್ ಪವಾರ್ ಆ ಮಾತನ್ನು ಪರೋಕ್ಷವಾಗಿ ಪ್ರಸ್ತಾಪಿಸಿ, ಮತ್ತಷ್ಟು ಪುಷ್ಠಿ ನೀಡಿದ್ದಾರೆ.

ಮೋದಿ ಅಲೆ ಅಂತ್ಯ, ನಮ್ಮ ಅಲೆ ಶುರು : ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ, ಹೀನಾಯ ಸೋಲು ಕಂಡಿರುವ ಬಿಜೆಪಿ ಬಗ್ಗೆ ಬೇರೆ ಬೇರೆ ನಾಯಕರು ಪ್ರತಿಕ್ರಿಯಿಸಿದ್ದಾರೆ. ಶಿವಸೇನಾ ಉದ್ಧವ್ ಬಣದ ಸಂಜಯ್ ರಾವತ್ ಪ್ರತಿಕ್ರಿಯಿಸಿ, ‘ಈಗ ಮೋದಿ ಅಲೆ ಮುಕ್ತಾಯವಾಗಿದೆ. ಇನ್ನೇನಿದ್ದರೂ ನಮ್ಮ ಅಲೆ ಶುರುವಾಗಿದೆ’ ಎಂದು ವ್ಯಂಗ್ಯವಾಡಿದ್ದಾರೆ. ಮಧ್ಯಪ್ರದೇಶ ಚುನಾವಣೆಯಲ್ಲೂ ಕರ್ನಾಟಕದ ರೀತಿಯೇ ಬಿಜೆಪಿಗೆ ಪಾಠ ಕಲಿಸಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ರಾಜ್ಯಸಭಾ ಸದಸ್ಯ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!