ಐಜ್ವಾಲ್: ಸೋಮವಾರ ಐಜ್ವಾಲ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಾದಯಾತ್ರೆ ಕೈಗೊಂಡಿದ್ದು, ಅಪಾರ ಸಂಖ್ಯೆಯ ಜನಸ್ತೋಮ ಅವರಿಗೆ ಸ್ವಾಗತ ಕೋರಿತು.
ವಿಧಾನಸಭೆ ಚುನಾವಣೆ ನಡೆಯಲಿರುವ ಮಿಜೋರಾಂನ ರಾಜಧಾನಿಯನ್ನು ತಲುಪಿದ ನಂತರ, ಅವರು ಚನ್ಮಾರಿ ಜಂಕ್ಷನ್‌ನಿಂದ ಪಾದಯಾತ್ರೆಯನ್ನು ಪ್ರಾರಂಭಿಸಿದರು ಮತ್ತು ನಗರದ ಅಂಕುಡೊಂಕಾದ ರಸ್ತೆಗಳ ಮೂಲಕ ಸಾಗಿದರು.
ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಧ್ವಜಗಳನ್ನು ಹಿಡಿದಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ಕಾಯುತ್ತಾ ನಿಂತಿದ್ದ ಜನರತ್ತ ಕೈಬೀಸಿ, ಪಾದಯಾತ್ರೆಯ ವೇಳೆ ತಮ್ಮನ್ನು ಭೇಟಿಯಾಗಲು ಬಂದವರ ಜತೆ ಕೈಕುಲುಕಿ ಸಂವಾದ ನಡೆಸಿದರು.
ಕೆಲವರು ಕಾಂಗ್ರೆಸ್ ಮುಖಂಡರೊಂದಿಗೆ ಸೆಲ್ಫಿ ತೆಗೆದುಕೊಂಡರು. ಪಾದಯಾತ್ರೆಯಲ್ಲಿ ಸಾಂಪ್ರದಾಯಿಕ ನೃತ್ಯಗಳನ್ನು ಸಹ ಪ್ರದರ್ಶಿಸಲಾಯಿತು.
ರಾಜಭವನದವರೆಗೆ ಸುಮಾರು 4-5 ಕಿ.ಮೀ ದೂರವನ್ನು ಕ್ರಮಿಸಲಿರುವ ರಾಹುಲ್ ಗಾಂಧಿ, ಮೆರವಣಿಗೆ ಮುಕ್ತಾಯದ ನಂತರ ರಾಜ್ಯಪಾಲರ ಭವನದ ಬಳಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
40 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 7 ರಂದು ಚುನಾವಣೆ ನಡೆಯಲಿದೆ.