ಅಮೆರಿಕ ಮೂಲದ ಶಾರ್ಟ್ ಸೆಲ್ಲಿಂಗ್ ಸಂಸ್ಥೆ ಹಿಂಡನ್‌ಬರ್ಗ್ ರಿಸರ್ಚ್ ವರದಿಯ ಪರಿಣಾಮಗಳನ್ನು ಪಟ್ಟಭದ್ರ ಹಿತಾಸಕ್ತಿಗಳು ದುರ್ಬಳಕೆ ಮಾಡಿಕೊಂಡವು ಎಂದು ಅದಾನಿ ಸಮೂಹದ ಮಾಲೀಕ ಗೌತಮ್ ಅದಾನಿ ಕಿಡಿಕಾರಿದ್ದಾರೆ.
ಅದಾನಿ ಗ್ರೂಪ್ ವಿರುದ್ಧ ಹಿಂಡನ್‌ಬರ್ಗ್ ವರದಿ ಪ್ರಕಟಿಸಿದ ಬಳಿಕ ಅದಾನಿ ಸಮೂಹದ ಕಂಪನಿಗಳ ಷೇರುಗಳು ದಿಢೀರ್ ಕುಸಿತ ಕಂಡಿದ್ದವು. ಒಂದು ಹಂತದಲ್ಲಿ ಅದಾನಿ ಗ್ರೂಪ್ ಮುಳಗಡೆಯಾಗುವ ಆತಂಕ ಎದುರಾಗಿತ್ತು. ಇದು ಷೇರು ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ಭಾರತದ ರಾಜಕಾರಣದಲ್ಲೂ ಕೋಲಾಹಲ ಎಬ್ಬಿಸಿತ್ತು.
ಇನ್ನೂ ಪೂರ್ಣಗೊಳ್ಳದ ಸೆಬಿ ತನಿಖೆ
ಹಿಂಡನ್‌ಬರ್ಗ್‌ನ ಆರೋಪಗಳ ಕುರಿತು ಮಾರುಕಟ್ಟೆ ನಿಯಂತ್ರಕ ಸೆಬಿ ತನಿಖೆ ನಡೆಸುತ್ತಿದ್ದು, ಇದು ಇನ್ನೂ ಪೂರ್ಣಗೊಂಡಿಲ್ಲ. ಇವೆಲ್ಲದರ ನಡುವೆ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು, ಅದಾನಿ ಕಂಪನಿಗಳ ಷೇರುಗಳ ಬೆಲೆಯಲ್ಲಿ ದಿಢೀರ್ ಏರಿಕೆಗೆ ಕಾರಣವಾಗಿರಬಹುದಾದ ಷೇರು ತಿರುಚುವಿಕೆಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟ ಪುರಾವೆ ಸಿಕ್ಕಿಲ್ಲ ಎಂದು ಹೇಳಿದೆ. ತಜ್ಞ ಸಮಿತಿಯ ತನಿಖೆಯಲ್ಲಿ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯ ವೈಫಲ್ಯವೂ ಕಂಡುಬಂದಿಲ್ಲ ಎಂಬುದಾಗಿ ಗೌತಮ್ ಅದಾನಿ ತಿಳಿಸಿದ್ದಾರೆ.
ಹಿಂಡನ್‌ಬರ್ಗ್ ತನ್ನ ವರದಿಯಲ್ಲಿ ಅದಾನಿ ಸಮೂಹವು ದಶಕಗಳಿಂದ ಷೇರು ತಿರುಚುವಿಕೆ ಹಾಗೂ ಲೆಕ್ಕಪತ್ರ ವಂಚನೆಯಲ್ಲಿ ತೊಡಗಿದೆ ಎಂದು ಆರೋಪಿಸಿತ್ತು. ಇದು ಉದ್ದೇಶಿತ ತಪ್ಪು ಮಾಹಿತಿಯಾಗಿದ್ದು, ಅದಾನಿ ಗ್ರೂಪ್‌ನ ಖ್ಯಾತಿಯನ್ನು ಹಾಳುಗೆಡವುವ ಮತ್ತು ಷೇರುಗಳ ಬೆಲೆಗಳನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡುವ ಮೂಲಕ ಲಾಭ ಗಳಿಸುವ ಗುರಿ ಹೊಂದಿದೆ ಎಂದು ಅವರು ಆರೋಪಿಸಿದ್ದಾರೆ.