Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಸಚಿವ ಶಿವಾನಂದ ಪಾಟೀಲ್‌ ಆತ್ಮಹತ್ಯೆ ಮಾಡಿಕೊಳ್ಳಲಿ, ನಾವೇ ಪರಿಹಾರ ಕೊಡ್ತೀವಿ: ರೈತರ ಘೋಷಣೆ

ಮಂಡ್ಯ : ಪರಿಹಾರದ ಮೊತ್ತ ಹೆಚ್ಚಿಸಿದ ಮೇಲೆ ರೈತರ ಆತ್ಮಹತ್ಯೆ ಕೂಡ ಹೆಚ್ಚಿದೆ ಎಂದಿದ್ದ ಸಚಿವ ಶಿವಾನಂದ ಪಾಟೀಲ್‌ ಹೇಳಿಕೆ ವಿರುದ್ಧ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಕ್ಕರೆ ಮತ್ತು ಎಪಿಎಂಸಿ ಸಚಿವರು ಆತ್ಮಹತ್ಯೆ ಮಾಡಿಕೊಂಡರೆ 10 ಲಕ್ಷ ರೂ. ಪರಿಹಾರ ನೀಡುವುದಾಗಿ ರೈತರು ಘೋಷಿಸಿದ್ದಾರೆ.

ಸಚಿವರೇ ಆತ್ಮಹತ್ಯೆ ಮಾಡಿಕೊಳ್ಳಲಿ ನಾವೇ ನಮ್ಮ ರೈತ ಸಂಘಟನೆಯಿಂದ 10 ಲಕ್ಷ ರೂ. ಪರಿಹಾರವನ್ನು ಸಚಿವರ ಕುಟುಂಬಕ್ಕೆ ಕೊಡುತ್ತೇವೆ ಎಂದು ರೈತ ಮುಖಂಡ ಇಂಗಲಕುಪ್ಪೆ ಕೃಷ್ಣ ಹೇಳಿದ್ದಾರೆ.

ಮಂಡ್ಯದಲ್ಲಿ ರೈತರ ಆತ್ಮಹತ್ಯೆ ವಿಚಾರವಾಗಿ ವ್ಯಂಗ್ಯದ ಹೇಳಿಕೆ ನೀಡಿದ್ದ ಶಿವಾನಂದ ಪಾಟೀಲ್‌ ಪ್ರತಿಕೃತಿ ದಹಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಕೃತಿ ದಹಿಸಿ ಬಾಯಿ ಬಡಿದುಕೊಂಡ ರೈತರು, ಭಿಕ್ಷಾ ಪಾತ್ರೆಯಿಡಿದು ಭಿಕ್ಷೆ ಬೇಡಿ ಶಿವಾನಂದ ಪಾಟೀಲ್‌ ಅವರಿಗೆ ಪರಿಹಾರದ ಹಣವನ್ನು ಸಂಗ್ರಹಿಸಿದರು. ಸಚಿವರು ಆತ್ಮಹತ್ಯೆ ಮಾಡಿಕೊಂಡರೇ ರೈತರೆ ಭಿಕ್ಷೆ ಎತ್ತಿ ಪರಿಹಾರ ಕೊಡ್ತೀವಿ ಎಂದು ರೈತರು ಅಣಕಿಸಿದರು.

ಪರಿಹಾರಕ್ಕಾಗಿ ರೈತರ ಆತ್ಮಹತ್ಯೆ ಎಂದಿದ್ದ ಸಚಿವ!

ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲ್ ಮಂಗಳವಾರ ಹೇಳಿದ್ದರು. ವೀರೇಶ್‌ ಕಮಿಟಿ ಬರುವ ಮುನ್ನ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆ ಇದ್ದವು. ಮೊದಲು 2 ಲಕ್ಷ ರೂ. ಪರಿಹಾರ ಕೊಡಲಾಗುತ್ತಿತ್ತು. ಪರಿಹಾರ ಹೆಚ್ಚಳವಾದ ನಂತರ ಹೃದಯಾಘಾತ, ಪ್ರೇಮ ವೈಫಲ್ಯ, ಕುಡಿದು ಆತ್ಮಹತ್ಯೆ ಮಾಡಿಕೊಂಡ ಎಲ್ಲವನ್ನೂ ಪರಿಹಾರದ ಆಸೆಗಾಗಿ ರೈತ ಆತ್ಮಹತ್ಯೆ ಪ್ರಕರಣ ಎಂದು ದಾಖಲಿಸಲಾಗುತ್ತಿದೆ ಎಂದು ಹೇಳಿದ್ದರು.

ರೈತರ ಪ್ರತಿಭಟನೆಗೆ ಮಣಿಯಿತಾ ಸರ್ಕಾರ?

ಇನ್ನು, ಮಂಡ್ಯ ರೈತರ ಪ್ರತಿಭಟನೆಗೆ ರಾಜ್ಯ ಸರ್ಕಾರ ಮಣಿದಂತೆ ಕಾಣುತ್ತಿದೆ. ಕೆಆರ್‌ಎಸ್‌ ಜಲಾಶಯದ ಹೊರ ಹರಿವಿನ ಪ್ರಮಾಣ ತಗ್ಗಿದ್ದು, ತಮಿಳುನಾಡಿಗೆ ನೀರು ಬಿಡುಗಡೆ ಪ್ರಮಾಣವನ್ನು ರಾಜ್ಯ ಸರ್ಕಾರ ಕಡಿಮೆ ಮಾಡಿದೆ. ಗುರುವಾರದವರೆಗೂ 5 ರಿಂದ 6 ಸಾವಿರ ಕ್ಯೂಸೆಕ್ ಹೋಗುತ್ತಿದ್ದ ನೀರು, ಶುಕ್ರವಾರ 2930 ಕ್ಯೂಸೆಕ್‌ಗೆ ಇಳಿದಿದೆ. ಸದ್ಯ ಕೆಆರ್‌ಎಸ್‌ ಜಲಾಶಯದಲ್ಲಿ 98.06 ಅಡಿ ನೀರು ಸಂಗ್ರಹವಾಗಿದೆ.

ಮಂಡ್ಯದಲ್ಲಿ ರೈತರ ಹೋರಾಟ ತೀವ್ರ!

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಹಿನ್ನೆಲೆ ಮಂಡ್ಯದಲ್ಲಿ ರೈತರ ಹೋರಾಟ ತೀವ್ರಗೊಂಡಿದೆ. ಮದ್ದೂರು ತಾಲೂಕಿನ ಬೆಸಗರಹಳ್ಳಿ ಗ್ರಾಮ ಸಂಪೂರ್ಣ ಬಂದ್ ಆಗಿದೆ. ಸುತ್ತಮುತ್ತಲ ಗ್ರಾಮಗಳಿಗೆ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಬೆಸರಗರಹಳ್ಳಿಯಲ್ಲಿ ರಾಜ್ಯ ಸರ್ಕಾರದ ನಡೆ ಖಂಡಿಸಿ ಅಂಗಡಿ ಮುಂಗಟ್ಟುಗಳು ಬಂದ್‌ ಮಾಡಲಾಗಿದ್ದು, ರೈತ ಸಂಘದ ಬಂದ್ ಕರೆಗೆ ವರ್ತಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ.

ಬಂದ್ ಹಿನ್ನೆಲೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದ್ದು, ಭತ್ತ, ರಾಗಿಗೆ ನೀರಿಲ್ವಲ್ಲೋ ಗೋವಿಂದ, ಕುಡಿಯೋಕು ನೀರಿಲ್ಲ ಗೋವಿಂದ ಗೋವಿಂದ. ಲಾಟಿ, ಗುಂಡು, ಜೈಲಿಗೆ ನಾವು ಎದುರುವುದಿಲ್ಲ ಎಂದು ರೈತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಸಿಎಂ, ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್‌, ಸಂಸದೆ ಸುಮಲತಾ ಅಂಬರೀಶ್‌ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಸಚಿವ ಶಿವಾನಂದ ಪಾಟೀಲ್ ವಿರುದ್ಧವೂ ಪ್ರತಿಭಟನೆಯನ್ನು ರೈತರು ನಡೆಸಿದರು. ಇದೇ ವೇಳೇ 420 ಡಿಕೆಶಿಗೆ ಧಿಕ್ಕಾರ ಧಿಕ್ಕಾರ, 420 ರಾಜ್ಯ ಸರ್ಕಾರ ಎಂದು ಘೋಷಣೆ ಕೂಗಿ ರೈತರ ಅಸಮಾಧಾನ ಹೊರಹಾಕಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ