ಉತ್ತರಾಖಂಡ್ : ಇತ್ತೀಚೆಗಷ್ಟೇ ಮುಸ್ಲಿಂ ಯುವಕನ ಜೊತೆ ಬಿಜೆಪಿ ಮುಖಂಡನ ಮಗಳ ಮದುವೆಗೆ ಸಂಬಂಧಿಸಿದ ಸುದ್ದಿ ಭಾರೀ ವೈರಲ್ ಆಗಿತ್ತು. ಇದೀಗ ಭಾರೀ ಟೀಕೆಗೆ ಕಾರಣವಾಗಿರುವುದರಿಂದ ತನ್ನ ಮಗಳ ಮದುವೆಯನ್ನು ರದ್ದುಗೊಳಿಸಲಾಗಿದೆ ಎಂದು ಬಿಜೆಪಿ ಮುಖಂಡ ತಿಳಿಸಿದ್ದಾರೆ.
ಉತ್ತರಾಖಂಡದಲ್ಲಿ ಬಿಜೆಪಿ ಮುಖಂಡ ಹಾಗೂ ನಗರಸಭೆ ಅಧ್ಯಕ್ಷ ಯಶಪಾಲ್ ಬೇನಂ ಅವರ ಪುತ್ರಿ ಮೋನಿಕಾ ಅವರ ಮದುವೆ ಮೇ 28 ರಂದು ರೈಸ್ ಅಹ್ಮದ್ ಅವರ ಮಗ ಮೋನಿಸ್ ಅಹ್ಮದ್ ಅವರೊಂದಿಗೆ ನಡೆಯಬೇಕಿತ್ತು. ಮದುವೆಗೆ ಸಂಬಂಧಿಸಿದಂತೆ ಲಗ್ನ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಲಗ್ನ ಪತ್ರಿಕೆ ಎಲ್ಲೆಡೆ ಹರಿದಾಡುತ್ತಿದ್ದಂತೆ ಈ ಮದುವೆಗೆ ಹಲವು ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಯಶ್ಪಾಲ್ ಬೇನಾಮ್ ಪಕ್ಷದ ಅನೇಕರು ಮದುವೆ ನಿಲ್ಲಿಸುವಂತೆ ಒತ್ತಾಯಿಸಿದ್ದರು.
ವಿವಾದ ವಿರೋಧಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದೇ ತಿಂಗಳು 28 ರಂದು ನಡೆಯಬೇಕಿದ್ದ ಮದುವೆಗೆ ತೆರೆಬಿದ್ದಿದೆ.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಯಶ್ಪಾಲ್ ಬೇನಮ್, ಮಗಳ ಸಂತೋಷಕ್ಕಾಗಿ ಮುಸ್ಲಿಂ ಯುವಕನೊಂದಿಗೆ ಮದುವೆ ಮಾಡಲು ಒಪ್ಪಿಕೊಂಡಿದ್ದೇನೆ. ಆದರೆ ಮದುವೆಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರತಿಕ್ರಿಯಿಸಿದ ರೀತಿಯನ್ನು ಗಮನದಲ್ಲಿಟ್ಟುಕೊಂಡು ಮದುವೆ ನಿಲ್ಲಿಸಲಾಗಿದೆ. ಈಗ ನಾನು ಸಾರ್ವಜನಿಕರ ಧ್ವನಿಯನ್ನೂ ಕೇಳಬೇಕಾಗಿದೆ ಎಂದು ಬೇನಾಮ್ ಹೇಳಿದ್ದಾರೆ.





