ನವದೆಹಲಿ : ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವ ಎರಡು ತಿಂಗಳ ಹಿಂದಿನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.
ಮಣಿಪುರದ ಪರಿಸ್ಥಿತಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಭಾರತದ ಪರಿಕಲ್ಪನೆ ಮೇಲೆ ದಾಳಿ ನಡೆಯುತ್ತಿರುವಾಗ ‘ಇಂಡಿಯಾ’ ಸುಮ್ಮನೆ ಮೌನವಾಗಿ ಇರುವುದಿಲ್ಲ” ಎನ್ನುವ ಮೂಲಕ ವಿರೋಧ ಪಕ್ಷಗಳ ಮೈತ್ರಿಕೂಟವು ಮಣಿಪುರ ಹಿಂಸಾಚಾರದ ಕುರಿತು ಸುಮ್ಮನಿರುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
“ಪ್ರಧಾನಿ ಅವರ ಮೌನ ಹಾಗೂ ನಿಷ್ಕ್ರಿಯತೆಯು ಮಣಿಪುರವನ್ನು ಅರಾಜಕತೆಗೆ ತಳ್ಳಿದೆ. ಮಣಿಪುರದಲ್ಲಿ ಭಾರತದ ಪರಿಕಲ್ಪನೆಯ ಮೇಲೆ ನಡೆಯುತ್ತಿರುವಾಗ ‘ಇಂಡಿಯಾ’ ಮೌನವಾಗಿ ಇರುವುದಿಲ್ಲ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ, ವೈರಲ್ ವಿಡಿಯೋ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಮಣಿಪುರದಲ್ಲಿ ನಡೆದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಚಿತ್ರಗಳು ಹೃದಯ ವಿದ್ರಾವಕವಾಗಿವೆ ಎಂದಿದ್ದಾರೆ.
“ಮಹಿಳೆಯರ ಮೇಲಿನ ಹಿಂಸಾಚಾರದ ಈ ಭಯಾನಕ ಘಟನೆಯನ್ನು ಎಷ್ಟು ಖಂಡಿಸಿದರೂ ಸಾಲದು. ಸಮಾಜದಲ್ಲಿ ಹಿಂಸಾಚಾರದ ಗರಿಷ್ಠ ಸಂಕಷ್ಟಗಳನ್ನು ಮಹಿಳೆಯರು ಮತ್ತು ಮಕ್ಕಳೇ ಅನುಭವಿಸುತ್ತಾರೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
“ಮಣಿಪುರದಲ್ಲಿ ಶಾಂತಿ ಸ್ಥಾಪಿಸುವ ಪ್ರಯತ್ನಗಳನ್ನು ಹೆಚ್ಚಿಸುವುದರ ಜತೆಗೆ ನಾವು ಹಿಂಸಾಚಾರವನ್ನು ಒಂದೇ ಧ್ವನಿಯಲ್ಲಿ ಖಂಡಿಸಬೇಕಿದೆ. ಕೇಂದ್ರ ಸರ್ಕಾರ, ಮಿ. ಪ್ರಧಾನಿ ಅವರು ಮಣಿಪುರದಲ್ಲಿನ ಹಿಂಸಾತ್ಮಕ ಘಟನೆಗಳ ಕಡೆಗೆ ಏಕೆ ತಮ್ಮ ಕಣ್ಣುಗಳನ್ನು ಕುರುಡಾಗಿಸಿಕೊಂಡಿದ್ದಾರೆ? ಅಂತಹ ಚಿತ್ರಗಳು ಮತ್ತು ಹಿಂಸಾತ್ಮಕ ಘಟನೆಗಳು ಅವರನ್ನು ಕಲಕುವುದಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
“ಸಾವಿರಾರು ಸಾವುಗಳಲ್ಲಿ ಮಾನವೀಯತೆ ಸತ್ತಿದೆ! ಮಹಿಳೆಯರು ಅವಮಾನ ಹಾಗೂ ಶೋಷಿತರಾಗುವುದು, ಬೆತ್ತಲೆಯಾಗಿ ಮೆರವಣಿಗೆಯಾಗುವುದನ್ನು ತಡೆಯುವುದು ಈ ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗದೆ ಇದ್ದರೆ, ಅದನ್ನು ಸುಮ್ಮನೆ ವಜಾಗೊಳಿಸಬೇಕು. ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಹೇರುವುದಕ್ಕೆ ಮೋದಿ ಸರ್ಕಾರವನ್ನು ತಡೆಯುತ್ತಿರುವುದು ಏನು?” ಎಂದು ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ನೆಟ್ಟಾ ಡಿಸೋಜಾ ಕಿಡಿಕಾರಿದ್ದಾರೆ.