ಮಧ್ಯಪ್ರದೇಶ : ಕರ್ನಾಟಕದ ವಿಧಾನಸಭೆ ಚುನಾವಣೆ ಸಮಯದಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿ ಅವರ ವಿರುದ್ಧ ಕಾಂಗ್ರೆಸ್ ಮಾಡಿದ್ದ ಪೇ ಸಿಎಂ ಅಭಿಯಾನದಂತೆ ಮಧ್ಯಪ್ರದೇಶದಲ್ಲೂ ಮಾಡಲು ಹೋಗಿ ಪೇಚಿಗೆ ಸಿಲುಕಿದೆ. ಕರ್ನಾಟಕದಲ್ಲಿ ಪೇಟಿಎಂ ಮಾದರಿಯಲ್ಲಿ ಪೇಸಿಎಂ ಎಂದು ಬರೆದು ಪೋಸ್ಟರ್ಗಳನ್ನು ಅಂಟಿಸಲಾಗಿತ್ತು, ಮಧ್ಯಪ್ರದೇಶದಲ್ಲೂ ಸಿಎಂ ಶಿವರಾಜ್ ಸಿಂಗ್ ಅವರ ಪೋಸ್ಟರ್ಗೆ ಫೋನ್ ಪೇ ಲೋಗೋ ಬಳಕೆ ಮಾಡಿ ಸಂಕಷ್ಟಕ್ಕೆ ಸಿಲುಕಿದೆ. ಅದರಲ್ಲಿ ಫೋನ್ ಪೇ ಮಾದರಿಯನ್ನು ಬಳಕೆ ಮಾಡಿರುವ ಕಾರಣ ಫೋನ್ ಪೇ ಸಂಸ್ಥೆಯು ಕಾಂಗ್ರೆಸ್ಗೆ ಎಚ್ಚರಿಕೆ ನೀಡಿದೆ.
ತಮ್ಮ ಲೋಗೋವನ್ನು ದುರ್ಬಳಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದು, ಕಾನೂನು ಸಮರದ ಎಚ್ಚರಿಕೆ ನೀಡಿದೆ. ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಜಿದ್ದಾಜಿದ್ದಿಯೂ ಜೋರಾಗಿದೆ. ಪೋಸ್ಟರ್ ವಾರ್, ಟ್ವಿಟ್ಟರ್ ವಾರ್, ಮಾತಿನ ಸಮರ ಎಲ್ಲವೂ ನಡೆಯುತ್ತಿದ್ದು ಸಧ್ಯಕ್ಕೆ ಪೋಸ್ಟರ್ ವಾರ್ ಚಾಲ್ತಿಯಲ್ಲಿದೆ.
ವರದಿ ಪ್ರಕಾರ, PhonePe ಕಂಪನಿಯು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನೊಂದಿಗೆ ಕಾಂಗ್ರೆಸ್ MPಯನ್ನು ಟ್ಯಾಗ್ ಮಾಡುವ ಮೂಲಕ ಎಚ್ಚರಿಕೆ ನೀಡಿದೆ. ಅವರು ಟ್ವೀಟ್ ಮಾಡಿ PhonePe ಲೋಗೋ ನಮ್ಮ ಕಂಪನಿಯ ನೋಂದಾಯಿತ ಟ್ರೇಡ್‌ಮಾರ್ಕ್ ಆಗಿದೆ. ಅದನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ.
ಪೋಸ್ಟರ್‌ನಿಂದ ನಮ್ಮ ಲೋಗೋ ಮತ್ತು ಬ್ರ್ಯಾಂಡ್ ಬಣ್ಣವನ್ನು ತೆಗೆದುಹಾಕಲು ನಾವು ವಿನಮ್ರವಾಗಿ ವಿನಂತಿಸುತ್ತೇವೆ. PhonePe ತನ್ನ ಬ್ರ್ಯಾಂಡ್ ಲೋಗೋವನ್ನು ರಾಜಕೀಯ ಅಥವಾ ರಾಜಕೀಯೇತರ ಯಾವುದೇ ಮೂರನೇ ವ್ಯಕ್ತಿಯಿಂದ ಬಳಸುವುದನ್ನು ನಾವು ವಿರೋಧಿಸುತ್ತೇವೆ, ನಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಬರೆದಿದೆ.
ಬಿಜೆಪಿಯೇ ಒಂದು ವಾರ ಮೊದಲು ಕಮಲ್ ನಾಥ್ ವಿರುದ್ಧ ಪೋಸ್ಟರ್ ಹಾಕಿತ್ತು, ಅವರೇ ಮೊದಲು ಈ ಪೋಸ್ಟರ್ ವಾರ್ ಆರಂಭಿಸಿದವರು ಎಂದು ಕಾಂಗ್ರೆಸ್ ದೂರಿದೆ. ಆದರೆ ಆ ಪೋಸ್ಟರ್ ನಾವು ಹಾಕಿದ್ದಲ್ಲ ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.
The PhonePe logo is a registered trademark of our company and any unauthorized use of PhonePe’s intellectual property rights will invite legal action. We humbly request @INCMP to remove the posters and banners featuring our brand logo and colour 🙏.
— PhonePe (@PhonePe) June 26, 2023