ಶಿವಮೊಗ್ಗ : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳಾದರೂ ಗ್ಯಾರಂಟಿ ಅಂಶಗಳನ್ನು ಪೂರ್ಣವಾಗಿ ಸಮರ್ಪಕವಾಗಿ ಜಾರಿ ಮಾಡಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಸಮಯ ಕೊಟ್ಟು ನೋಡೋಣ. ಅದಾದ್ಮೇಲೆ ನಾವು ಕಾರ್ಯಪ್ರವೃತ್ತರಾಗುತ್ತೇವೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಎಲ್ಲ ಗ್ಯಾರಂಟಿ ಯೋಜನೆಗಳನ್ನು ಮೊದಲನೇ ಸಚಿವ ಸಂಪುಟದಲ್ಲಿಯೇ ಜಾರಿ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ, ಇನ್ನು ಗ್ಯಾರಂಟಿಗಳನ್ನು ಜಾರಿ ಮಾಡಿಲ್ಲ. ಕಾದು ನೋಡೋಣ, ಇನ್ನು ಸ್ವಲ್ಪ ಸಮಯ ಕೊಡೋಣ ಎಂದು ನಮ್ಮ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ರಾಜಕೀಯ ಪಕ್ಷಕ್ಕೆ ಸಮಯ ಕೊಡಬೇಕು, ಅವರು ಹೇಗೆ ಮಾಡುತ್ತಾರೆ ಎಂಬುದನ್ನು ನೋಡಿ ಮುಂದೆ ನಮ್ಮ ಹೆಜ್ಜೆಗಳನ್ನು ಇಡುತ್ತೇವೆ ಎಂದರು.
ಹೌದು, ಎಲ್ಲರಿಗೂ ಉಚಿತ ಎಂದು ಹೇಳಿದ್ದರು. ಈಗ ಅನೇಕ ಷರತ್ತುಗಳನ್ನು ವಿಧಿಸುತ್ತಿದ್ದಾರೆ. ಜನರಿಗೆ ಆಕ್ರೋಶ ವ್ಯಕ್ತವಾಗಿದೆ. ಹಾಗಾಗಿ ಬಿಜೆಪಿ ನಾಯಕರೆಲ್ಲಾ ಒಟ್ಟಿಗೆ ಕೂತು ಚರ್ಚೆ ಮಾಡಿ ಜನಪರ ಕಾರ್ಯಕ್ರಮಗಳನ್ನ ಕಾಂಗ್ರೆಸ್ ಸರ್ಕಾರ ಜಾರಿಗೆ ತರುವಂತೆ ನಾವು ಯೋಚನೆ ಮಾಡಿ ಹೋರಾಟ ರೂಪಿಸುತ್ತೇವೆ ಎಂದು ಈಶ್ವರಪ್ಪ ಹೇಳಿದರು.
ನನಗೆ 75 ವರ್ಷ ಆಗಿದೆ, ಖುಷಿ ತಂದಿದೆ! : 75 ವರ್ಷ ನನಗೆ ಆಗಿದೆ ಎಂದು ನನ್ನ ಹಿತೈಷಿಗಳು ಎಲ್ಲರೂ ಸಂಭ್ರಮಿಸುತ್ತಿದ್ದಾರೆ. ಈ ವಿಚಾರ ನನಗೆ ಖುಷಿ ತಂದಿದೆ. ಇದು ನನ್ನ ಭಾಗ್ಯ ಎಂದು ಭಾವಿಸುತ್ತೇನೆ. ಇಂದು ಕಾಶಿ ಮಠದ ಜಗದ್ಗುರುಗಳಾದ ಚಂದ್ರಶೇಖರ ಶಿವಾಚಾರ್ಯರು ನನ್ನ ಮನೆಗೆ ಬಂದು ನನ್ನನ್ನು ಆಶೀರ್ವಾದ ಮಾಡಿದ್ದಾರೆ. ಅವರಾಗಿಯೇ ನನ್ನ ಹುಟ್ಟು ಹಬ್ಬದ ಮಾಹಿತಿ ತಿಳಿದು ನನ್ನ ಮನೆಗೆ ಬಂದಿರುವುದು ನನ್ನ ಪುಣ್ಯ. ಎಲ್ಲ ಹಿತೈಷಿಗಳು ನನಗೆ ಆಶೀರ್ವಾದ ಮಾಡಿದ್ದಾರೆ. ಬರುವ ದಿನಗಳಲ್ಲಿ ಈ ಸಮಾಜದ ಸೇವೆ ಮಾಡೋದಕ್ಕಾಗಿ ಹಾಗೂ ಧರ್ಮ ರಕ್ಷಣೆಗಾಗಿ ನಾನು ಕೆಲಸ ಮಾಡುತ್ತೇನೆ. ಇವತ್ತು ಹೆಚ್ಚು ಸ್ಪೂರ್ತಿ ನನಗೆ ಸಿಕ್ಕಿದೆ ಎಂದು ನಾನು ಭಾವಿಸುತ್ತೇನೆ. ಮೊನ್ನೆ ನಮ್ಮ ಇಡೀ ಕುಟುಂಬದ 18 ಜನ ಸದಸ್ಯರು ಚಾರ್ ಧಾಮ್ ಪ್ರವಾಸ ಮಾಡಿ ಬಂದಿದ್ದೇವೆ ಎಂದರು.
ಸಾಕಷ್ಟು ತೀರ್ಥಯಾತ್ರೆ ಮಾಡಿದೀನಿ! : ಚುನಾವಣೆಗಳೆಲ್ಲಾ ಮುಗಿದ ನಂತರ ಸಾಕಷ್ಟು ಸಮಯ ಮಾಡಿಕೊಂಡು ಪುಣ್ಯಕ್ಷೇತ್ರಗಳನ್ನು ದರ್ಶನ ಮಾಡಿ ಬಂದಿದ್ದೇವೆ. ಯಮುನೋತ್ರಿಗೆ ಹೋಗುವ ಸಂದರ್ಭದಲ್ಲಿ ಮಳೆ ಬಂತು, ಜನರ ಮಧ್ಯೆ ನಾಲ್ಕು ಗಂಟೆ ಮಳೆಯಲ್ಲೇ ನಿಂತಿದ್ದು ನನಗೆ ವಿಶೇಷ ಅನುಭೂತಿ ನೀಡಿದೆ ಎಂದು ಹೇಳಿದರು.