ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್‍ನ ಉಪಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವ ಎಸ್.ಎನ್.ಬೋಸರಾಜ್ ಹಾಗು ತಿಪ್ಪಣ್ಣಪ್ಪ ಕಮಕನೂರು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಧಾನಪರಿಷತ್‍ನಲ್ಲಿ ಖಾಲಿ ಇದ್ದ 3 ಸದಸ್ಯ ಸ್ಥಾನಗಳಿಗೆ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಲಾಗಿತ್ತು. 3 ಸದಸ್ಯ ಸ್ಥಾನದ ಚುನಾವಣೆಗೂ ತಲಾ ಒಬ್ಬರೇ ಅಭ್ಯರ್ಥಿಗಳು ಉಳಿದಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
2028ರ ಜೂ.14ರವರೆಗೆ ಅವಧಿಯಿರುವ ವಿಧಾನಪರಿಷತ್‍ನ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಗದೀಶ್ ಶೆಟ್ಟರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರ ರಾಜೀನಾಮೆಯಿಂದ ಈ ಸ್ಥಾನ ತೆರವಾಗಿತ್ತು. 2026ರ ಜೂ.30ರವರೆಗೆ ಅವಧಿಯಿರುವ ಮೇಲ್ಮನೆ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ತಿಪ್ಪಣ್ಣಪ್ಪ ಕಮಕನೂರು ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಾಜಿ ಸಚಿವ ಆರ್.ಶಂಕರ್ ಅವರ ರಾಜೀನಾಮೆಯಿಂದ ಈ ಸ್ಥಾನ ತೆರವಾಗಿತ್ತು. 2024ರ ಜೂ.17ರವರೆಗಿನ ಅವಧಿಯ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಚಿವ ಎನ್.ಎಸ್.ಬೋಸರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಾಜಿ ಸಚಿವ ಬಾಬುರಾವ್ ಚಿಂಚನಸೂರು ರಾಜೀನಾಮೆಯಿಂದ ಈ ಸ್ಥಾನ ತೆರವಾಗಿತ್ತು. ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಜೂ.20ರಂದು ಈ ಮೂವರು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು.
ಅಂತಿಮವಾಗಿ ಚುನಾವಣಾ ಕಣದಲ್ಲಿ 3 ಮಂದಿ ಮಾತ್ರ ಉಳಿದಿದ್ದರು. ನಾಮಪತ್ರ ವಾಪಸ್ ಪಡೆಯಲು ಇಂದು ಕಡೆಯ ದಿನವಾಗಿದ್ದು, ನಿಗದಿತ ಅವಧಿ ಮುಗಿದ ಬಳಿಕ ಮೇಲ್ಮನೆಗೆ ಈ ಮೂವರು ಅವಿರೋಧವಾಗಿ ಆಯ್ಕೆಯಾಗಿರುವುದನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ.