ಮೈಸೂರು: ಕಳೆದ 7 ದಶಕಗಳ ಕಾಲ ಸಿನಿ ಪ್ರಿಯರನ್ನು ರಂಜಿಸಿದ್ದ ಲಕ್ಷ್ಮೀ ಚಿತ್ರ ಮಂದಿರ ಇನ್ನು ಮುಂದೆ ಇತಿಹಾಸ ಸೇರಲಿದೆ. ಮೈಸೂರಿನ ಲಕ್ಷ್ಮೀ ಥಿಯೇಟರ್ ಇತಿಹಾಸ ಪುಟ ಸೇರಿದ್ದು, ಮಂಗಳವಾರದಿಂದ ಚಿತ್ರಮಂದಿರ ಕಟ್ಟಡ ನೆಲಸಮ ಮಾಡುವ ಕಾರ್ಯ ಆರಂಭವಾಗಿದೆ. ಕೊರೊನಾದಿಂದ ಕಂಗೆಟ್ಟ ಚಿತ್ರಮಂದಿರದ ಮಾಲೀಕರು ಮುಚ್ಚಲು ನಿರ್ಧರಿಸಿದ್ದಾರೆ. ಉದ್ಯಮ ನಷ್ಟದಿಂದ ಲಕ್ಷ್ಮೀ ಚಿತ್ರಮಂದಿರ ಮುಚ್ವುವ ನಿರ್ಧಾರ ಕೈಗೊಳ್ಳಲಾಗಿತ್ತು. 1949 ರಿಂದ ಇಲ್ಲಿಯವರಿಗೆ ಸಿನಿ ಪ್ರಿಯರ ರಂಜಿಸುತ್ತಿದ್ದ ಚಿತ್ರಮಂದಿರ. ಇನ್ನು ಮುಂದೆ ನೆನಪಿನಲ್ಲಿ ಮಾತ್ರ ಉಳಿಯಲಿದೆ.
ಅಲ್ಲದೇ 50ಕ್ಕೂ ಹೆಚ್ಚು ಚಿತ್ರಗಳು ಶತದಿನೋತ್ಸವ ಆಚರಣೆ ಮಾಡಿದೆ. ಮತ್ತೊಂದು ವಿಶೇಷವೆಂದರೆ ಇಲ್ಲಿ ಹೊಸಬರ ಸಿನಿಮಾಗಳಿಗೂ ಅವಕಾಶ ನೀಡುತ್ತಿದ್ದರು ಲಕ್ಷೀ ಚಿತ್ರಮಂದಿರದ ಮಾಲೀಕರು. ಆದರೆ ಕಳೆದ ಒಂದೂವರೆ ವರ್ಷದಿಂದ ಚಿತ್ರ ಮಂದಿರವನ್ನ ಬಂದ್ ಮಾಡಿದ್ದರು. ಈಗ ಕಂಪ್ಲೀಟ್ ನೆಲಸಮ ಮಾಡಲಾಗಿದೆ . ‘ರಿವೈಂಡ್ ಕನ್ನಡ’ ಚಿತ್ರವೇ ಲಕ್ಷೀ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡ ಕೊನೆ ಚಿತ್ರವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಹೆಚ್ಚಾದ ಕಾರಣ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಅಳಿವಿನ ಅಂಚಿನಲ್ಲಿದೆ. ಸಾಂಸ್ಕೃತಿಕ ನಗರಿ ಮೈಸೂರಿನ ಸಿನಿಮಾ ಮಂದಿರಗಳು ಇತಿಹಾಸದ ಪುಟ ಸೇರುತ್ತಿದ್ದು, ಬಹುತೇಕ ಚಿತ್ರಮಂದಿರಗಳು ಮುಚ್ಚುವ ಹಂತದಲ್ಲಿದೆ. ಅಂತೆಯೇ ಸಿನಿ ರಸಿಕರ ಹಾಟ್ ಫೇವರೇಟ್ ಅಂತ ಕರೆಸಿಕೊಳ್ತಿದ್ದ ಗತಕಾಲದ ಇತಿಹಾಸ ಹೊಂದಿದ್ದ ಮೈಸೂರಿನ ‘ಲಕ್ಷ್ಮೀ ಟಾಕೀಸ್’ ನೆಲಸಮ ಆಗಿದೆ. ಮುಂದಿನ 2 ದಿನಗಳಲ್ಲಿ ಲಕ್ಷ್ಮೀ ಥಿಯೇಟರ್ ಸಂಪೂರ್ಣ ಮಾಯವಾಗಲಿದೆ.