Mysore
17
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಆಸ್ಪತ್ರೆಯಲ್ಲಿ ಬೆಡ್ ಕೊರತೆ : ಪುತ್ರನನ್ನು ಕಳೆದುಕೊಂಡ ಬಿಜೆಪಿಯ ಮಾಜಿ ಸಂಸದ

ಲಕ್ನೋ : ಎಮೆರ್ಜೆನ್ಸಿ ವಾರ್ಡ್‍ನಲ್ಲಿ ಬೆಡ್ ಕೊರತೆಯಿಂದಾಗಿ ಬಿಜೆಪಿಯ ಮಾಜಿ ಸಂಸದನ ಪುತ್ರ ಮೃತಪಟ್ಟ ಘಟನೆ ಉತ್ತರಪ್ರದೇಶ ಲಕ್ನೋದ ಎಸ್‍ಜಿಪಿಜಿಐ ಆಸ್ಪತ್ರೆಯಲ್ಲಿ ನಡೆದಿದೆ.

ಮೃತನನ್ನು ಪ್ರಕಾಶ್ ಮಿಶ್ರಾ (41) ಎಂದು ಗುರುತಿಸಲಾಗಿದ್ದು, ಇವರು ಭಾರತೀಯ ಜನತಾ ಪಕ್ಷದ ಮಾಜಿ ಸಂಸದ ಭೈರೋನ್ ಪ್ರಸಾದ್ ಮಿಶ್ರಾ ಪುತ್ರ.

ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ಮಿಶ್ರಾ ಅವರನ್ನು ಸೋಮವಾರ ರಾತ್ರಿ 11 ಗಂಟೆಗೆ ಎಸ್‍ಜಿಪಿಜಿಐ ತುರ್ತು ವಿಭಾಗಕ್ಕೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಬೆಡ್ ಕೊರತೆಯಿಂದಾಗಿ ತುರ್ತು ಚಿಕಿತ್ಸೆ ಸಿಗಲಿಲ್ಲ. ಹೀಗಾಗಿ ಆಸ್ಪತ್ರೆಗೆ ಹೋದ ಸ್ವಲ್ಪ ಸಮಯದ ಬಳಿಕ ಮಗ ಮೃತಪಟ್ಟಿರುವುದಾಗಿ ಪ್ರಸಾದ್ ಮಿಶ್ರಾ ದೂರಿದ್ದಾರೆ. ಅಲ್ಲದೆ ಮಗನ ಶವದೊಂದಿಗೆ ತುರ್ತು ವಾರ್ಡ್‍ನ ಹೊರಗೆ ಪ್ರತಿಭಟನೆ ಮಾಡಿದರು.

ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಪ್ರಸಾದ್‌ ಮಿಶ್ರಾ ಅವರು, ನಾನು ನನ್ನ ಮಗನನ್ನು ಕಳೆದುಕೊಂಡಿದ್ದೇನೆ ಎಂದು ಗೋಳಾಡಿದರು. ನನ್ನ ನಂತರ ಸುಮಾರು 20-25 ಜನರು ಚಿಕಿತ್ಸೆ ಪಡೆದರು. ನಾನು ಪ್ರತಿಭಟನೆಗೆ ಕುಳಿತಾಗ ಎಲ್ಲರೂ ವೈದ್ಯನ ಬಗ್ಗೆ ದೂರು ನೀಡುತ್ತಿದ್ದರು. ಆ ವೈದ್ಯನಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಆಸ್ಪತ್ರೆ ಮುಖ್ಯಸ್ಥ ಡಾ.ಆರ್.ಕೆ.ಧಿಮಾನ್ ಮಾತನಾಡಿ, ಆಸ್ಪತ್ರೆಗೆ ದಾಖಲಿಸಿದಾಗ ರೋಗಿಯನ್ನು ಐಸಿಯುಗೆ ಕರೆದೊಯ್ಯಲು ವೈದ್ಯರು ಹೇಳಿದರು. ಆದರೆ ಅಲ್ಲಿ ಬೆಡ್‍ಗಳು ಲಭ್ಯವಿಲ್ಲ ಎಂದು ರೋಗಿ ಕಡೆಯವರಿಗೆ ತಿಳಿಸಿದ್ದಾರೆ. ಯಾಕೆ ಬೆಡ್ ಇಲ್ಲ ಎಂದು ಹೇಳಿದರು ತಿಳಿದಿಲ್ಲ. ಈ ಸಂಬಂಧ ನಾವು ಸಮಿತಿಯನ್ನು ರಚಿಸಿದ್ದೇವೆ. ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಸದ್ಯ ವೈದ್ಯರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು.

ಘಟನೆಯ ಕುರಿತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಪ್ರತಿಕ್ರಿಯಿಸಿ, ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದು ಆಸ್ಪತ್ರೆಯ ತಪ್ಪಲ್ಲ. ಆದರೆ ಇದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಪ್ಪು. ಆಸ್ಪತ್ರೆಗೆ ಏಕೆ ಬಜೆಟ್ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.

ಘಟನೆ ಸಂಬಂಧ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಕಟ್ಟುನಿಟ್ಟಿನ ಕ್ರಮದ ಭರವಸೆ ನೀಡಿದ್ದಾರೆ. ಅಲ್ಲದೆ ಮಾಜಿ ಸಂಸದನ ಮನೆಗೆ ಭೇಟಿ ಮಾಡಿದ್ದಾರೆ. ಇದೊಂದು ದುರದೃಷ್ಟಕರ ಘಟನೆಯಾಗಿದೆ. ಈ ಸಂಬಂಧ ತ್ರಿಸದಸ್ಯ ಸಮಿತಿಯನ್ನು ರಚಿಸಲಾಗಿದ್ದು, ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗುವುದು ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!