ತಿರುವನಂತಪುರಂ : ಕೇರಳದ ಕೊಚ್ಚಿಯಲ್ಲಿ ಕ್ರಿಶ್ಚಿಯನ್ ಧಾರ್ಮಿಕ ಕೂಟದಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತ ವ್ಯಕ್ತಿ ಪೊಲೀಸರಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ಕೇರಳದ ಕೊಚ್ಚಿಯ ಕಲಮಸ್ಸೇರಿ ಧಾರ್ಮಿಕ ಸಮಾವೇಶದ ಸಂದರ್ಭದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ತ್ರಿವಳಿ ಸ್ಫೋಟಕ್ಕೆ ಸಂಬಂಧಿಸಿದಂತೆ ತ್ರಿಶೂರ್ ಜಿಲ್ಲೆಯಲ್ಲಿ ಓರ್ವ ಶಂಕಿತ ವ್ಯಕ್ತಿ ಪೊಲೀಸರಿಗೆ ಶರಣಾಗಿದ್ದಾನೆ. ಸ್ಫೋಟಕ್ಕೆ ನಾನೇ ಕಾರಣ ಎಂದು ಹೇಳಿಕೊಂಡ ಆ ವ್ಯಕ್ತಿ ಕೊಡಕರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.
ಶರಣಾದ ವ್ಯಕ್ತಿಯನ್ನು 44 ವರ್ಷದ ಡೊಮಿನಿಕ್ ಮಾರ್ಟಿನ್ ಎಂದು ಗುರುತಿಸಲಾಗಿದ್ದು, ಈತ ಕ್ರಿಶ್ಚಿಯನ್ ಧಾರ್ಮಿಕ ಗುಂಪಿನ ಅನುಯಾಯಿ ಎಂದು ಹೇಳಿಕೊಂಡಿದ್ದಾನೆ ಎಂದು ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಎಂ ಆರ್ ಅಜಿತ್ ಕುಮಾರ್ ತಿಳಿಸಿದ್ದಾರೆ.
ಡೊಮಿನಿಕ್ ಮಾರ್ಟಿನ್ ಸ್ಫೋಟದ ಹೊಣೆ ಹೊತ್ತುಕೊಂಡಿದ್ದು, ಅವನು ತನ್ನ ವಾದವನ್ನು ಬೆಂಬಲಿಸುವ ಸಾಕ್ಷ್ಯವನ್ನು ಸಹ ನೀಡಿದ್ದಾನೆ. ಕೃತ್ಯಕ್ಕೆ ನೀಡಿದ ಕಾರಣ ಮತ್ತು ಸಾಕ್ಷ್ಯಗಳನ್ನು ಸಹ ಪರಿಶೀಲಿಸುತ್ತಿದ್ದೇವೆ. ಬೆಳಿಗ್ಗೆ ಸಂಭವಿಸಿದ್ದ ಸ್ಫೋಟದಲ್ಲಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದರು. 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರೆ, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಎಡಿಜಿಪಿ ಸುದ್ದಿಗಾರರಿಗೆ ತಿಳಿಸಿದರು.
ಈ ಘಟನೆಯು ಪೊಲೀಸರ ಗುಪ್ತಚರ ವೈಫಲ್ಯದ ಪರಿಣಾಮವೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಎಡಿಜಿಪಿ, ಎಲ್ಲಾ ಪೊಲೀಸ್ ಇಲಾಖೆಯ ಶಾಖೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.