ತಿರುವನಂತಪುರಂ : ಕೇರಳದ ಮೊದಲ ತೃತೀಯ ಲಿಂಗಿ ಬಾಡಿಬಿಲ್ಡರ್ ಪ್ರವೀಣ್ ನಾಥ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ನಡೆದು ಕೆಲವೇ ಗಂಟೆಗಳ ಬಳಿಕ ಅವರ ಜತೆಗಾತಿ ಕೂಡಾ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಪ್ರವೀಣ್ ನಾಥ್ ಅವರ ಪಾರ್ಟ್ನರ್ ರಿಶಾನಾ ಆಯೆಶಾ ಕೂಡಾ ಆತ್ಮಹತ್ಯೆಗೆ ಯತ್ನಿಸಿದ್ದು, ಪರಿಸ್ಥಿತಿ ಗಂಭೀರವಾಗಿದೆ.
ಟ್ರಾನ್ಸ್‌ಜೆಂಡರ್ ಬಾಡಿಬಿಲ್ಡರ್ ಅವರ ಜತೆಗಾತಿ ರಿಶಾನಾ ಆಯೆಶ್ ಓರ್ವ ಮಾಡೆಲ್ ಆಗಿ ಗುರುತಿಸಿಕೊಂಡಿದ್ದು, ಅವರು ಕೂಡಾ ಆತ್ಮಹತ್ಯಗೆ ಯತ್ನಿಸಿದ್ದಾರೆ. ಇದೀಗ ರಿಶಾನಾ ಅವರನ್ನು ತ್ರಿಶೂರ್ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಪರಿಸ್ಥಿತಿ ಕೂಡಾ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಪ್ರವೀಣ್ ನಾಥ್ ಅವರು ಗುರುವಾರವಷ್ಟೇ ತಮ್ಮ ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಇಬ್ಬರ ಮೇಲೆ ಇತ್ತೀಚೆಗಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸೈಬರ್‌ದಾಳಿಯಿಂದಾಗಿ ನಿರಾಸೆ ಹಾಗೂ ಅವಮಾನಕ್ಕೊಳಗಾಗಿದ್ದರು. ಈ ಕಾರಣಕ್ಕಾಗಿಯೇ ಈ ಘಟನೆ ಸಂಭವಿಸಿದೆ ಎಂದು ತೃತೀಯಲಿಂಗಿ ಸಮುದಾಯದವರು ಆರೋಪಿಸಿದ್ದಾರೆ. ಪ್ರವೀಣ್ ನಾಥ್ ಅವರು ರಿಶಾನ್ ಅವರನ್ನು ಫೆಬ್ರವರಿ 14ರ ಪ್ರೇಮಿಗಳ ದಿನದಂದೇ ವಿವಾಹವಾಗಿದ್ದರು. ಇದರ ಬೆನ್ನಲ್ಲೇ ಹಲವಾರು ಮಂದಿ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಸೈಬರ್‌ಅಟ್ಯಾಕ್ ಮಾಡಿದ್ದರು. ಇದರಿಂದ ಬೇಸತ್ತು ಈ ಜೋಡಿ ಸೋಷಿಯಲ್ ಮೀಡಿಯಾದಿಂದ ಹೊರಬಂದಿದ್ದರು.
ಈ ದಂಪತಿಗಳು ಬೇರೆ-ಬೇರೆಯಾಗುತ್ತಿದ್ದಾರೆ ಎಂದು ಪೋಸ್ಟರ್ ಒಂದು ಹರಿದಾಡುತ್ತಿತ್ತು. ಈ ಪೋಸ್ಟ್ ನೋಡಿದ ಬಳಿಕ ನಾನಂತೂ ಭಾವನಾತ್ಮಕವಾಗಿ ಕುಸಿದು ಹೋಗಿದ್ದೇನೆ. ನಾನು ಆ ಪೋಸ್ಟ್ ಡಿಲೀಟ್ ಮಾಡಿದ್ದರೂ ಸಹಾ, ಅದರ ಸ್ಕ್ರೀನ್‌ಶಾಟ್ ಬೇರೆ ಬೇರೆ ಕಡೆ ಹರಿದಾಡುತ್ತಿದೆ ಎಂದು ಪ್ರವೀಣ್ ನಾಥ್ ತಾವು ಆತ್ಮಹತ್ಯೆ ಮಾಡಿಕೊಳ್ಳುವ ಎರಡು ದಿನ ಮುಂಚೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.
ಈ ಜೋಡಿಯು 2020ರಲ್ಲಿ ತ್ರಿಶೂರ್‌ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಕ್ಕಾಗಿ ನಡೆದ ಸಮಾವೇಶದಲ್ಲಿ ಈ ಜೋಡಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಇದಾದ ಬಳಿಕ ಈ ಇಬ್ಬರ ನಡುವೆ ಪ್ರೇಮಾಂಕುರ ಬೆಳೆದು ವ್ಯಾಲೆಂಟೈನ್ ಡೇ ದಿನದಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.