ಕೋಯಿಕ್ಕೋಡ್: ಕೇರಳದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ಪ್ರಮುಖ ಆರೋಪಿ ಶಾರೂಕ್ ಸೈಫಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಆರೋಪಿ ವಿಚಾರಣೆ ನಡೆಯುತ್ತಿದ್ದು, ಹೆಚ್ಚಿನ ವಿವರಗಳನ್ನು ಈ ಹಂತದಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎಂ. ಆರ್. ಅಜಿತ್ ಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದರು.
‘ತಾನು ಅಪರಾಧ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ನಾವು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದೇವೆ. ಇಂಥ ಪ್ರಕರಣಗಳಲ್ಲಿ ಭಾಗಿಯಾಗುವ ಆರೋಪಿಗಳು ತಮ್ಮ ಉದ್ದೇಶವನ್ನು ಸಾಮಾನ್ಯವಾಗಿ ಬಹಿರಂಗಪಡಿಸುವುದಿಲ್ಲ. ವಿಚಾರಣೆ ದೀರ್ಘ ಪ್ರಕ್ರಿಯೆ’ ಎಂದು ಕುಮಾರ್ ಹೇಳಿದರು.
ಮಹಾರಾಷ್ಟ್ರದ ರತ್ನಗಿರಿಯಲ್ಲಿ ಸೆರೆಸಿಕ್ಕಿದ್ದ ಆರೋಪಿಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದುಕೊಂಡಿದೆ. ಕೋಯಿಕ್ಕೋಡ್ ವೈದ್ಯಕೀಯ ಮಂಡಳಿಯು ಆರೋಪಿಯು ದೈಹಿಕವಾಗಿ ಸದೃಢ ಎಂದು ಘೋಷಿಸಿದ ನಂತರ ಆತನನ್ನು ಪೊಲೀಸರು ಬಂಧಿಸಿದರು.
ಘಟನೆ ನಡೆದ ಪ್ರದೇಶದಲ್ಲಿ ಹಳಿಗಳ ಮೇಲೆ ಪುಸ್ತಕ ಮತ್ತು ಪೆಟ್ರೋಲ್ ಬಾಟಲಿಯಿದ್ದ ಬ್ಯಾಗ್‌ವೊಂದು ಪತ್ತೆಯಾಗಿದ್ದು, ಅದು ಆರೋಪಿಯದ್ದೇ ಆಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದರು.
ಅಲಪ್ಪುವ – ಕಣ್ಣೂರು ಎಕ್ಸ್‌ಪ್ರೆಸ್ ರೈಲು ಕೋರಪುವ ಎಂಬಲ್ಲಿ ಮೇಲ್ಸೇತುವೆ ಮೇಲೆ ಚಲಿಸುತ್ತಿದ್ದ ವೇಳೆ ಆರೋಪಿ ಬೋಗಿಯೊಂದರ ಪ್ರಯಾಣಿಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟಿದ್ದ. ಘಟನೆಯಲ್ಲಿ 9 ಮಂದಿ ಗಾಯಗೊಂಡರೆ, ಮೂವರು ಮೃತಪಟ್ಟಿದ್ದರು.