ಮಡಿಕೇರಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರವಾಗಿ ಇಂದು ವಿವಿಧ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆಕೊಟ್ಟು ಪ್ರತಿಭಟನೆ ನಡೆಸುತ್ತಿವೆ. ಆದರೆ ಕಾವೇರಿಯ ತವರು ಕೊಡಗಿನಲ್ಲಿ ಕರ್ನಾಟಕ ಬಂದ್‍ಗೆ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ.
ಜಿಲ್ಲೆಯಲ್ಲಿ ಕರ್ನಾಟಕ ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಕಾವೇರಿ ಬಂದ್ ಬಿಸಿ ತಟ್ಟದೆ ಕನ್ನಡ ಪರ ಹಾಗೂ ರೈತ ಸಂಘಟನೆಗಳಿಗೆ ಮಾತ್ರ ಪ್ರತಿಭಟನೆ ಸೀಮಿತವಾಗಿದೆ. ಮುಂಜಾನೆಯಿಂದಲೂ ಜಿಲ್ಲೆಯಲ್ಲಿ ಸಾರಿಗೆ, ಆಟೋ ಸಂಚಾರ, ಅಂಗಡಿ ಮುಗ್ಗಟ್ಟು, ವ್ಯಾಪಾರ – ವಹಿವಾಟು ಸೇರಿದಂತೆ ಜನ ಜೀವನ ಎಂದಿನಂತೆ ಸಾಗುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುತ್ತಿದ್ದಾರೆ.
11 ಗಂಟೆಯ ನಂತರ ಕೊಡಗು ಹಾಗೂ ಮೈಸೂರು ಗಡಿ ಭಾಗವಾದ ಕುಶಾಲನಗರದ ಕಾವೇರಿ ನದಿಯ ಬಳಿ ಕರ್ನಾಟಕ ಕಾವಲು ಪಡೆಯ ಕಾರ್ಯಕರ್ತರು ರೈತರು ಪ್ರತಿಭಟನೆ ಭಾಗಿಯಾಗಲ್ಲಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.