ನವದೆಹಲಿ : ಜಿಎಸ್‌ಟಿ ಸಂಗ್ರಹದ ವಿಚಾರದಲ್ಲಿ ಮತ್ತೊಂದು ದಾಖಲೆ ಸೃಷ್ಟಿಯಾಗಿದೆ. ಸೆಪ್ಟೆಂಬರ್‌ನಲ್ಲಿ 1.62 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು, ಹಾಲಿ ಹಣಕಾಸು ವರ್ಷದಲ್ಲಿ ನಾಲ್ಕನೇ ಬಾರಿಗೆ 1.60 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ತೆರಿಗೆ ಸಂಗ್ರಹವಾದಂತಾಗಿದೆ.
ಕಳೆದ ವರ್ಷದ ಸೆಪ್ಟೆಂಬರ್‌ಗೆ ಹೋಲಿಸಿದರೆ ಈ ಬಾರಿಯ ಸಂಗ್ರಹ ಮೊತ್ತ ಶೇ. 10ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ 1.47 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು.
ಸೆಪ್ಟೆಂಬರ್‌ನಲ್ಲಿ ಸಂಗ್ರಹ ಆಗಿರುವ ಒಟ್ಟು ಜಿಎಸ್‌ಟಿಯಲ್ಲಿ ಕೇಂದ್ರ ಜಿಎಸ್‌ಟಿ 29,818 ಕೋಟಿ ರೂ., ರಾಜ್ಯ ಜಿಎಸ್‌ಟಿ 37,657 ಕೋಟಿ ರೂ., ಸಮಗ್ರ ಜಿಎಸ್‌ಟಿ 83,623 ಕೋಟಿ ರೂ. ಹಾಗೂ ಸೆಸ್ 11,695 ಕೋಟಿ ರೂ. ಒಳಗೊಂಡಿದೆ.
ಮಾರುಕಟ್ಟೆಯಲ್ಲಿ ವಹಿವಾಟು ಚುರುಕುಗೊಂಡಿರುವುದರ ಸೂಚಕ ಇದಾಗಿದೆ. ದಸರಾ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಾರಾಟ ಭರಾಟೆ ಜೋರಾಗಿ, ಅಕ್ಟೋಬರ್‌ನಲ್ಲಿ ದಾಖಲೆಯ ಜಿಎಸ್‌ಟಿ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ದೊಡ್ಡ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಹಾಗೂ ತೆಲಂಗಾಣ ಜಿಎಸ್‌ಟಿ ಸಂಗ್ರಹದಲ್ಲಿ ಭಾರೀ ಏರಿಕೆ ದಾಖಲಿಸಿವೆ. ಕರ್ನಾಟಕ ದೇಶದಲ್ಲೇ ಜಿಎಸ್‌ಟಿ ಸಂಗ್ರಹದಲ್ಲಿ ಮತ್ತೆ ಎರಡನೇ ಸ್ಥಾನ ಕಾಯ್ದುಕೊಂಡಿದ್ದು, ಮೊದಲ ಸ್ಥಾನದಲ್ಲಿ ಮಹಾರಾಷ್ಟ್ರವಿದೆ.
ಮಹಾರಾಷ್ಟ್ರದಲ್ಲಿ ಜಿಎಸ್‌ಟಿ ಸಂಗ್ರಹ ಶೇ. 17ರಷ್ಟು ಏರಿಕೆ ಕಂಡಿದ್ದು ಕಳೆದ ಬಾರಿ ಸಂಗ್ರಹವಾಗಿದ್ದ 21,403 ಕೋಟಿ ರೂ.ನಿಂದ ಈ ಬಾರಿ 25,137 ಕೋಟಿ ರೂ.ಗೆ ಏರಿಕೆ ಕಂಡಿದೆ. ಎರಡನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ಶೇ. 20ರಷ್ಟು ಹೆಚ್ಚಳವಾಗಿದ್ದು 9,760 ಕೋಟಿ ರೂ.ನಿಂದ 11,693 ಕೋಟಿ ರೂ.ಗೆ ತಲುಪಿದೆ.
ತಮಿಳುನಾಡಿನಲ್ಲಿ ಜಿಎಸ್‌ಟಿ ಸಂಗ್ರಹ ಶೇ. 21ರಷ್ಟು ಹೆಚ್ಚಾಗಿದ್ದು, 8,637 ಕೋಟಿ ರೂ.ನಿಂದ 10,481 ಕೋಟಿ ರೂ.ಗೆ ತಲುಪಿದೆ. ಈ ಮೂಲಕ ಗುಜರಾತ್‌ನ್ನು ಹಿಂದಿಕ್ಕಿ ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲೇ 3ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ನಾಲ್ಕನೇ ಸ್ಥಾನದಲ್ಲಿರುವ ಗುಜರಾತ್‌ನಲ್ಲಿ ತೆರಿಗೆ ಸಂಗ್ರಹ ಕೇವಲ ಶೇ. 12ರಷ್ಟು ಏರಿಕೆಯಾಗಿದ್ದು 9,020 ಕೋಟಿ ರೂ.ನಿಂದ 10,129 ಕೋಟಿ ರೂ.ಗೆ ಹೆಚ್ಚಳವಾಗಿದೆ.
ತೆಲಂಗಾಣದಲ್ಲಿ ಜಿಎಸ್‌ಟಿ ಸಂಗ್ರಹ ಬರೋಬ್ಬರಿ ಶೇ. 33ರಷ್ಟು ಏರಿಕೆ ಕಂಡಿದ್ದು ಏಕಾಏಕಿ 3,915 ಕೋಟಿ ರೂ.ನಿಂದ 5,226 ಕೋಟಿ ರೂ.ಗೆ ತಲುಪಿದೆ. ಈ ಮೂಲಕ ದೇಶದಲ್ಲೇ ದೊಡ್ಡ ರಾಜ್ಯಗಳಲ್ಲಿ ಗರಿಷ್ಠ ಬೆಳವಣಿಗೆ ದಾಖಲಿಸಿದ ಕೀರ್ತಿಗೆ ತೆಲಂಗಾಣ ಪಾತ್ರವಾಗಿದೆ.
ಕೇರಳ ಹೊರತುಪಡಿಸಿ ದಕ್ಷಿಣದ ರಾಜ್ಯಗಳಲ್ಲಿ ಜಿಎಸ್‌ಟಿ ಸಂಗ್ರಹ ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಆಂಧ್ರ ಪ್ರದೇಶದಲ್ಲಿ ಕೂಡ ಜಿಎಸ್‌ಟಿ ಸಂಗ್ರಹ ಶೇ. 17ರಷ್ಟು ಏರಿಕೆ ಕಂಡಿದ್ದು 3,132 ಕೋಟಿ ರೂ.ನಿಂದ 3,658 ಕೋಟಿ ರೂ.ಗೆ ತಲುಪಿದೆ.