Mysore
20
overcast clouds
Light
Dark

9 ವರ್ಷದ ಪ್ರೀತಿಯನ್ನ ಉಳಿಸಿದ ಕರ್ನಾಟಕ ಹೈಕೋರ್ಟ್‌ : ಮದುವೆಯಾಗಲು ಅಪರಾಧಿಗೆ 15 ದಿನಗಳ ಪೆರೋಲ್‌

ಬೆಂಗಳೂರು : ಪ್ರೇಯಸಿಯ ಜೊತೆ ಮದುವೆಯಾಗಲು ಜೈಲಿನಲ್ಲಿರುವ ಆರೋಪಿಗೆ ಕರ್ನಾಟಕ ಹೈಕೋರ್ಟ್‌ 15 ದಿನಗಳ ಕಾಲ ಪೆರೋಲ್‌ ನೀಡಿದೆ. ಕೊಲೆ ಪ್ರಕರಣದಲ್ಲಿ 10 ವರ್ಷ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಯನ್ನು 15 ದಿನ ಪೆರೋಲ್‌ ಮೇಲೆ ಬಿಡುಗಡೆ ಮಾಡುವಂತೆ ಜೈಲು ಅಧಿಕಾರಿಗಳಿಗೆ ಹೈಕೋರ್ಟ್‌ ಸೂಚಿಸಿದ್ದು, ಈ ಮೂಲಕ ಪ್ರೇಮಿಗಳನ್ನು ಒಂದು ಮಾಡುವ ಕಾರ್ಯಕ್ಕೆ ಮುಂದಾಗಿದೆ.

ತನ್ನ ಮಗ ಪ್ರೀತಿಸಿದ ಹುಡುಗಿ ಬೇರೆಯವರನ್ನು ಮದುವೆಯಾಗುತ್ತಾಳೆ ಎಂದು ಹೆದರಿ ಮದುವೆಗಾಗಿ ತನ್ನ ಮಗನನ್ನು ಪೆರೋಲ್‌ ಮೇಲೆ ಬಿಡುಗಡೆ ಮಾಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಹೆಚ್ಚುವರಿ ಸರ್ಕಾರಿ ವಕೀಲರು, ಮದುವೆಗಾಗಿ ಪೆರೋಲ್‌ ನೀಡಲು ಯಾವುದೇ ಅವಕಾಶ ಇಲ್ಲ. ಅಪರಾಧಿಯು ಬೇರೊಬ್ಬರ ಮದುವೆಗೆ ಹಾಜರಾಗಲು ಬಯಸಿದರೆ, ಅದು ವಿಭಿನ್ನ ಸನ್ನಿವೇಶವಾಗಿರುತ್ತಿತ್ತು ಎಂದು ವಾದಿಸಿದ್ದರು.

ಆದರೆ, ಇದನ್ನು ಅಸಾಮಾನ್ಯ ಸನ್ನಿವೇಶ ಎಂದು ಪರಿಗಣಿಸಿರುವ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಅಪರಾಧಿ ಆನಂದ್‌ಗೆ ಪೆರೋಲ್‌ ನೀಡಿ ಜೈಲಿನಿಂದ 15 ದಿನ ಬಿಡುಗಡೆ ಮಾಡುವಂತೆ ಜೈಲು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಪೆರೋಲ್‌ ಮೇಲೆ ಅಪರಾಧಿಯ ಬಿಡುಗಡೆ ಅತ್ಯಗತ್ಯ ಎಂದು ವಾದಿಸುತ್ತಿದ್ದಾರೆ. ಬಿಡುಗಡೆಯಾಗದಿದ್ದರೆ ಅಪರಾಧಿಯು ತನ್ನ ಜೀವನದ ಪ್ರೀತಿಯನ್ನು ಕಳೆದುಕೊಳ್ಳುತ್ತಾನೆ ಎಂದು ನ್ಯಾಯಾಲಯ ಪೆರೋಲ್‌ ನೀಡಲು ಸೂಚಿಸಿದೆ.

ಇನ್ನು, ಹೆಚ್ಚುವರಿ ಸರ್ಕಾರಿ ವಕೀಲರ ಪ್ರಕಾರ, ಜೈಲು ಕೈಪಿಡಿಯ ಕಲಂ 636ರ ಅಡಿಯಲ್ಲಿ ಪೆರೋಲ್‌ ಪಡೆಯುವ ಉಲ್ಲೇಖಿಸಿರುವ ಉದ್ದೇಶಗಳಲ್ಲಿ ಅಪರಾಧಿ ಆನಂದ್‌ ಸಲ್ಲಿಸಿರುವ ಉದ್ದೇಶ ಬರುವುದಿಲ್ಲ. ಆದರೆ, ಜೈಲು ಕೈಪಿಡಿಯ ಕಲಂ 636ರ ಉಪ ಕಲಂ 12ರಂತೆ ವಿವೇಚನಾ ಅಧಿಕಾರ ಇದ್ದು, ಯಾವುದೇ ಅಸಾಧಾರಣ ಸಂದರ್ಭಗಳಲ್ಲಿ ಪೆರೋಲ್ ನೀಡಬಹುದಾಗಿದೆ ಎಂದು ಹೇಳಿದ್ದಾರೆ.

ಆನಂದ್‌ ಅವರ ತಾಯಿ ರತ್ನಮ್ಮ ಹಾಗೂ ಆತನ ಪ್ರಿಯತಮೆ ನೀತಾ ಜಿ ಎಂಬುವವರು ಹೈಕೋರ್ಟ್‌ಗೆ ಪೆರೋಲ್‌ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ 30 ವರ್ಷದ ನೀತಾ ಅವರು ಆನಂದ್‌ ಅವರು ನನ್ನನ್ನು ಮದುವೆಯಾಗದಿದ್ದರೇ, ನನಗೆ ಬೇರೆ ಮದುವೆಯಾಗುತ್ತದೆ. ಆದ್ದರಿಂದ ಆನಂದ್‌ನನ್ನು ಪೆರೋಲ್‌ ಮೇಲೆ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದರು. ನಾನು ಕಳೆದ 9 ವರ್ಷಗಳಿಂದ ಆನಂದ್‌ನನ್ನು ಪ್ರೀತಿಸುತ್ತಿದ್ದೇನೆ ಎಂದು ಅರ್ಜಿಯಲ್ಲಿ ನೀತಾ ಹೇಳಿದ್ದರು.

ಕೊಲೆ ಪ್ರಕರಣದಲ್ಲಿ ಆನಂದ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಬಳಿಕ ಅದನ್ನು 10 ವರ್ಷಗಳ ಜೈಲು ಶಿಕ್ಷೆಗೆ ಇಳಿಸಲಾಯಿತು. ಅದರಲ್ಲಿ ಈಗಾಗಲೇ ಆನಂದ್‌ ಆರು ವರ್ಷಗಳ ಶಿಕ್ಷೆಯನ್ನು ಅನುಭವಿಸಿದ್ದಾರೆ. ತಾಯಿ ಮತ್ತು ಆನಂದ್‌ ಪ್ರಿಯತಮೆಯ ಪರ ವಕೀಲರು ಸಲ್ಲಿಸಿದ್ದ ವಾದವನ್ನು ನ್ಯಾಯಾಲಯ ದಾಖಲಿಸಿಕೊಂಡಿದೆ.

ಅರ್ಜಿದಾರರ ವಾದವನ್ನು ಆಲಿಸಿದ ಹೈಕೋರ್ಟ್‌, ಅಪರಾಧಿ ಆನಂದ್‌ ಅವರನ್ನು ಏಪ್ರಿಲ್‌ 5ರ ಮುಂಜಾನೆಯಿಂದ ಏಪ್ರಿಲ್‌ 20ರ ಸಂಜೆವರೆಗೂ ಪೆರೋಲ್‌ ಮೇಲೆ ಬಿಡುಗಡೆ ಮಾಡುವಂತೆ ಪರಪ್ಪನ ಅಗ್ರಹಾರದ ಕಾರಾಗೃಹಗಳ ಉಪ ಮಹಾನಿರೀಕ್ಷಕರು ಹಾಗೂ ಮುಖ್ಯ ಪೊಲೀಸ್ ಅಧೀಕ್ಷಕರಿಗೆ ನಿರ್ದೇಶನ ನೀಡಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ