Mysore
21
broken clouds

Social Media

ಗುರುವಾರ, 01 ಜನವರಿ 2026
Light
Dark

ಮತ ಕೇಳುವ ನೈತಿಕತೆ ಜೆಡಿಎಸ್ ಬಿಜೆಪಿಗೆ ಇಲ್ಲ : ಡಿಕೆ ಶಿವಕುಮಾರ್

ಚನ್ನಪಟ್ಟಣ : ಜೆಡಿಎಸ್ ಮತ್ತು ಬಿಜೆಪಿ ಗೆ ಮತ ಕೇಳುವ ಯೋಗ್ಯತೆ ಇಲ್ಲ. ಜನಸಾಮಾನ್ಯರ ಬದುಕು ರೂಪಿಸುವ ಶಕ್ತಿ ಇರುವ ಕಾಂಗ್ರೆಸ್ ಅನ್ನು ತಾಲೂಕಿನ ಜನತೆ ಬೆಂಬಲಿಸಬೇಕು ಎಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಈ ತಾಲೂಕು ಬಹಳ ವಿಶಿಷ್ಟವಾದದ್ದು. ಜಾತಿಧರ್ಮ ಮೀರಿ ವಿಶ್ವಾಸಕ್ಕೆ ಬೆಲೆ ನೀಡುವ ತಾಲೂಕಿನ ಬಗ್ಗೆ ನನಗೆ ಅಪಾರವಾದ ಪ್ರೀತಿಯಿದೆ. ಒಕ್ಕಲಿಗರ ಪ್ರಾಬಲ್ಯವಿದ್ದರೂ ಸಹ, ಈ ನೆಲ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯದ ಡಿ.ಟಿ.ರಾಮು, ಸಾದತ್ ಆಖಿಖಾನ್ ರವರನ್ನು ಶಾಸಕರನ್ನಾಗಿ ಮಾಡಿದೆ. ಅದೇರೀತಿ ಹಿಂದುಳಿದ ಸಮುದಾಯದ ಗಂಗಾಧರ್ ರನ್ನು ಕ್ಷೇತ್ರದ ಅಭ್ಯರ್ಥಿ ಮಾಡಿದ್ದೇವೆ. ಅವರನ್ನು ಗೆಲ್ಲಿಸಿ, ನನ್ನ ಕೈ ಬಲಪಡಿಸಬೇಕು ಎಂದು ವಿನಂತಿಸಿದರು.

ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಚಿತ್ರರಂಗದಲ್ಲಿ ಸಾಕಷ್ಟು ಪ್ರಸಿದ್ಧಿ ‌ಪಡೆದಿದ್ದ ಅಂಬರೀಶ್ ರಾಮನಗರದಲ್ಲಿ ಸೋತರು. ನಾನು ಕೈಜೋಡಿಸಿದರೂ ಸಹ ಕುಮಾರಸ್ವಾಮಿ ಸುಪುತ್ರ ಮಂಡ್ಯದಲ್ಲಿ ಸೋತರು. ಮಾಜಿ ಪ್ರಧಾನಿ ದೇವೇಗೌಡರು ಸಹ ತುಮಕೂರಿನಲ್ಲಿ ಸೋಲುಂಡರು. ಹೀಗಾಗಿ, ವಿರೋಧಿಗಳು ಎಷ್ಟೇ ಬಲಿಷ್ಟ ರಾಗಿರಬಹುದು. ಕಾರ್ಯಕರ್ತರು ತಮ್ಮ ಮನೋಬಲ ಕುಗ್ಗಿಸಿಕೊಳ್ಳದೇ ಹೋರಾಟ ನಡೆಸುವ ಮೂಲಕ ಗಂಗಾಧರ್ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೊಡಿ ಎಂದು ಕರೆ ನೀಡಿದರು.

ಜೆಡಿಎಸ್ ಬಿಜೆಪಿ ಕಾರ್ಯಕರ್ತರು ಬೆಂಬಲಿಸಿ : ತಮ್ಮ ಭಾಷಣದುದ್ದಕ್ಕೂ ಕುಮಾರಸ್ವಾಮಿ ಮತ್ತು ಯೋಗೇಶ್ವರ್ ರನ್ನು ಕುಟುಕಿದ ಡಿಕೆಶಿ, ಇಬ್ಬರ ವಿರುದ್ಧವೂ ಟೀಕಾಪ್ರಹಾರ ನಡೆಸಿದರು. ನಮ್ಮ ಕಾರ್ಯಕರ್ತರಿಗೆ ಭಾಷಣ ಮಾಡಲು ನಾನು ಇಲ್ಲಿಗೆ ಬಂದಿಲ್ಲ. ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ತಿಳುವಳಿಕೆ ನೀಡಲು ಬಂದಿದ್ದೇನೆ. ನಿಮ್ಮ ಅಣ್ಣನನ್ನು ಸಿಎಂ ಮಾಡಲು ಹಾಗೂ ಉಳಿಸಲು ನಾನು ಶ್ರಮಪಡಲಿಲ್ಲವೇ? ಎಂದು ಜೆಡಿಎಸ್ ಕಾರ್ಯಕರ್ತರನ್ನು ಪ್ರಶ್ನಿಸಿದರು.
ಯೋಗೇಶ್ವರ್ ಮೇಲ್ಮನೆ ಸದಸ್ಯತ್ವದ ಅವಧಿ ಇನ್ನು ನಾಲ್ಕು ವರ್ಷ ಇದೆ. ಈ ಇಬ್ಬರು ಇಷ್ಟು ವರ್ಷ ಅಧಿಕಾರ ಅನುಭವಿಸಿದ್ದಾರೆ. ಆದರೆ, ತಾಲೂಕಿನ ಅಭಿವೃದ್ಧಿಗೆ ಇವರ ಕೊಡುಗೆ ಏನು? ಇವರುಗಳನ್ನು ತಿರಸ್ಕರಿಸಿ ನಿಮ್ಮ ಮನೆಮಗನಾದ ನನಗೆ ಈ ಬಾರಿ ಬೆಂಬಲ ನೀಡಿ ಸ್ವಾಭಿಮಾನ ಮೆರೆಯಿರಿ ಎಂದು ಮನವಿ ಮಾಡಿಕೊಂಡರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!