Mysore
20
overcast clouds
Light
Dark

ಜೈನ ಮುನಿ ಹತ್ಯೆ ತನಿಖೆಯನ್ನು ಸಿಬಿಐಗೆ ನೀಡಲ್ಲ: ಜಿ ಪರಮೇಶ್ವರ್‌

ಹುಬ್ಬಳ್ಳಿ : ನನ್ನ ಮಾತಿಗೆ ಬೆಲೆ ಕೊಟ್ಟು ಮುನಿಗಳು ದೇಹ ತ್ಯಾಗ ನಿರ್ಧಾರ ಕೈ ಬಿಟ್ಟಿದ್ದಾರೆ. ಜೈನ ಸಮುದಾಯದ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸಿದ್ಧ. ನಮ್ಮ ಪೊಲೀಸರೇ ಸಮರ್ಥವಾಗಿದ್ದು, ಯಾವುದೇ ಸಿಬಿಐ ತನಿಖೆ ಅಗತ್ಯವಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್‌ ಹೇಳಿದ್ದಾರೆ.

ಹುಬ್ಬಳ್ಳಿ ತಾಲೂಕಿನ ವರೂರಿನಲ್ಲಿ ಜೈನಮುನಿ ಗುಣಧರನಂದಿ‌ ಮಹಾರಾಜರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಇದು ಬಹಳ ವಿಭಿನ್ನ ಸಂದರ್ಭ, ಈ ವೇಳೆ ಮುನಿಗಳನ್ನು ಭೇಟಿ ಮಾಡಿದ್ದೇವೆ. ದೂರು ಬಂದ ತಕ್ಷಣ ಪೊಲೀಸ್ ಇಲಾಖೆ ಕಾರ್ಯ ಪ್ರವೃತ್ತರಾಗಿದ್ದು, ಆರೋಪಿಗಳನ್ನು ಬಂಧಿಸಿ ಓರ್ವ ಡಿವೈಎಸ್‌ಪಿ ತನಿಖೆ ನಡೆಸುತ್ತಿದ್ದಾರೆ. ತನಿಖೆಯಿಂದ ಮತ್ತಷ್ಟು ವಿಚಾರ ಹೊರಬರಲಿದೆ. ನಾನು ವರೂರಿನ ಮುನಿಗಳ ಹತ್ತಿರ ಕರೆ ಮಾಡಿ ಮಾತನಾಡಿದ್ದೆ, ಸರ್ಕಾರ ಜೈನ ಸಮುದಾಯದ ಜೊತೆಗೆ ಇರುವ ಭರವಸೆ ನೀಡಿದ್ದೆ. ಹೀಗಾಗಿ ನಾನೇ ಮಂದಿರಕ್ಕೆ ಬಂದು ಮುನಿಗಳ ಭೇಟಿ ಮಾಡಿರುವೆ ಎಂದು ಹೇಳಿದರು.

ನನ್ನ ಮಾತಿಗೆ ಬೆಲೆ ಕೊಟ್ಟು ಮುನಿಗಳು ದೇಹ ತ್ಯಾಗ ನಿರ್ಧಾರ ಕೈ ಬಿಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಮಾಡಿ ಭೇಟಿಯ ಬಗ್ಗೆ ಮಾಹಿತಿ ಪಡೆದರು. ಸರ್ಕಾರ ಜೈನ ಸಮುದಾಯದ ಪರವಾಗಿದೆ ಎಂಬ ಭರವಸೆಯನ್ನು ಸಿಎಂ ನೀಡಿದ್ದಾರೆ.

ಜೈನ ಮುನಿಗಳಿಗೆ ಹೆಚ್ಚಿನ ಭದ್ರತೆ ನೀಡಲಾಗಿದ್ದು, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಜೈನ ಮುನಿಗಳು ತಂಗಲು ವ್ಯವಸ್ಥೆ ಮಾಡಲಾಗುತ್ತದೆ. ಜೈನ ಅಭಿವೃದ್ಧಿ ಮಂಡಳಿ ಕ್ರಮ ಸ್ಥಾಪಿಸುವ ಬಗ್ಗೆ ಸಿಎಂ ಅವರಿಗೆ ತಿಳಿಸುವೆ. ಆದಷ್ಟು ಬೇಗ ಈ ಕಾರ್ಯವನ್ನು ನಮ್ಮ ಸರ್ಕಾರ ಮಾಡುತ್ತದೆ. ಜೈನ ಮಂದಿರಗಳಿಗೆ ಮತ್ತಷ್ಟು ಭದ್ರತಾ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಜೈನರ ಕ್ಷಮೆಯಾಚಿಸಿದ ಪರಮೇಶ್ವರ್!

ರಾಜ್ಯದಲ್ಲಿ ಇಂತಹ ಘಟನೆಗಳು ಮತ್ತೆ ನಡೆಯಬಾರದು, ಹೀಗಾಗಿ ಕಠಿಣವಾದ ಕ್ರಮಗಳನ್ನು ತೆಗೆದುಕೊಳ್ಳುತ್ತವೆ. ಕರ್ನಾಟಕ ಸರ್ವ ಜನಾಂಗದ ಶಾಂತಿತೋಟವನ್ನಾಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಶ್ರಮಿಸುತ್ತದೆ. ಇದು ಘೋರವಾದ ಹತ್ಯೆಯಾಗಿದ್ದು, ಇದನ್ನು ಖಂಡಿಸಿ ಅಮೆರಿಕ, ಯೂರೋಪ್ ಸೇರಿದಂತೆ ಎಲ್ಲ ಕಡೆ ಉಪವಾಸ ನಡೆಯುತ್ತಿದೆ. ನಾನು ಜೈನ ಸಮುದಾಯದ ಕ್ಷಮೆಯನ್ನು ಕೇಳುವೆ. ದಯವಿಟ್ಟು ವಿಶ್ವದ ಎಲ್ಲಾ ಮುನಿಗಳು ಉಪವಾಸವನ್ನು ವಾಪಸ್‌ ಪಡೆಯಬೇಕು ಎಂದು ಮನವಿ ಮಾಡಿದರು.

ನಮ್ಮ ಸರ್ಕಾರ ಜೈನ ಸಮುದಾಯದ ಪರವಾಗಿದೆ. ಇದಕ್ಕೆ ಯಾರು ರಾಜಕೀಯ ಬಣ್ಣವನ್ನು ಕೊಡಬಾರದು, ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳೋದು ಬೇಡ. ಚುನಾವಣೆ ಸಮಯದಲ್ಲಿ ರಾಜಕೀಯ ಮಾಡಿ. ಆದರೆ, ಇಂತಹ ಸಂದರ್ಭಗಳಲ್ಲಿ ಸರ್ಕಾರದ ಮೇಲೆ ಭರವಸೆಯಿಟ್ಟು ವಿವೇಚನೆಗೆ ಬಿಡಬೇಕು ಎಂದು ಹೇಳಿದರು.

ಪ್ರಹ್ಲಾದ್‌ ಜೋಶಿ ವಿರುದ್ಧ ಕಿಡಿ!

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಸಿಬಿಐ ತನಿಖೆಗೆ ಆಗ್ರಹಿಸಿರುವ ಬಗ್ಗೆ ಮಾತನಾಡಿ, ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಈ ರೀತಿ ಮಾತನಾಡುತ್ತಿರುವುದು ವಿಪರ್ಯಾಸ. ಯಾರೋ ದಾರಿಯಲ್ಲಿ ಹೋಗುವವರ ರೀತಿ ಮಾತನಾಡುತ್ತಿದ್ದಾರೆ. ನಾನು ಅವರಿಗೆ ಈ ರೀತಿ ಮಾತನಾಡಬೇಡಿ ಎಂದು ಮನವಿ ಮಾಡುವೆ. ನಮ್ಮ ಪೊಲೀಸ್ ಇಲಾಖೆ ಸಮರ್ಥವಾಗಿದ್ದು, ಅವರೇ ತನಿಖೆ ಮಾಡುತ್ತಾರೆ. ಯಾವುದೇ ಸಿಬಿಐ ತನಿಖೆ ಅಗತ್ಯವಿಲ್ಲ ಎಂದು ಹೇಳಿದರು.

ಅದರ ಜೊತೆ ಮೈಸೂರಿನಲ್ಲಿ ಯುವ ಬ್ರಿಗೇಡ್ ಸದಸ್ಯ ಹತ್ಯೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೊಲೆ ಮಾಡಿದವರು ಯಾರೇ ಇರಲಿ ಅವರನ್ನು ಶೀಘ್ರ ಬಂಧನ ಮಾಡುತ್ತವೆ ಎಂದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ