ಚಿಕ್ಕಬಳ್ಳಾಪುರ: ಇಂದು ರಾಜ್ಯದ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮೊದಲ ಹಂತದಲ್ಲಿ ಒಟ್ಟು 14 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಮತದಾನ ಪ್ರಕ್ರಿಯೆ ಆರಂಭವಾಗುವ ಮುನ್ನವೇ ಐಟಿ ಅಧಿಕಾರಿಗಳು ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಅವರಿಗೆ ಶಾಕ್ ನೀಡಿದ್ದಾರೆ.
ಸುಧಾಕರ್ ಆಪ್ತರಾದ ಮಾದಾವರ ಗೋವಿಂದಪ್ಪ ಅವರ ಮನೆ ಮೇಲೆ ಬೆಳ್ಳಂಬೆಳಿಗ್ಗೆ ಐಟಿ ದಾಳಿ ನಡೆಸಿದೆ. ಗೋವಿಂದಪ್ಪ ಸುಧಾಕರ್ ಆಪ್ತರು ಹಾಗೂ ಬಿಜೆಪಿಯ ಜಿಲ್ಲಾಧ್ಯಕ್ಷರು ಕೂಡಾ ಆಗಿದ್ದರು.
ಗೋವಿಂದಪ್ಪ ಅವರ ನಲಮಂಗಲದ ಮನೆಯಲ್ಲಿ ಹಣ ಇದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿರುವ 10 ಮಂದಿ ತಂಡದ ಐಟಿ ಅಧಿಕಾರಿಗಳು, ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದು, ಹಣ ಪತ್ತೆಯಾಗಿದೆ.
ದಾಳಿ ವೇಳೆ ಕೋಟ್ಯಾಂತರ ರೂ ಹಣ, ಚಿನ್ನಾಭರಣ ಪತ್ತೆಯಾಗಿದ್ದು, ಇವುಗಳಲ್ಲಿ ದಾಖಲೆಯಿಲ್ಲದ 4.80 ಕೋಟಿ ರೂ ಹಣವನ್ನು ಐಟಿ ಇಲಾಖೆ ವಶಪಡಿಸಿಕೊಂಡಿದೆ.