ನವದೆಹಲಿ : ಸೂರ್ಯಯಾನ, ಚಂದ್ರಯಾನದ ನಂತರ ಇಸ್ರೋ ಮತ್ತೊಂದು ಮೈಲುಗಲ್ಲಿಗೆ ಸಜ್ಜಾಗಿದೆ. ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಸಜ್ಜಾಗಿದ್ದು, ಇದೇ ತಿಂಗಳಲ್ಲಿ ಪರೀಕ್ಷಾರ್ಥ ಉಡಾವಣೆ ನಡೆಯಲಿದೆ.
ಭಾರತೀಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ಈಗಾಗಲೇ ಚಂದ್ರಯಾನ, ಸೂರ್ಯಯಾನ ಯೋಜನೆಗಳನ್ನು ಯಶಸ್ವಿಗೊಳಿಸಿ ನಭೋಮಂಡಲದಲ್ಲಿ ಇತಿಹಾಸ ನಿರ್ಮಿಸಿದೆ. ಇದೀಗ ಮತ್ತೊಂದು ಇತಿಹಾಸ ನಿರ್ಮಿಸಲು ಸಜ್ಜಾಗಿದ್ದು, ಮಾನವ ಸಹಿತ ಗಗನಯಾನದ ಯೋಜನೆ ಸಿದ್ಧ ಮಾಡಿದೆ. ಈ ಗಗನಯಾನಕ್ಕೂ ಮುನ್ನ ಪರೀಕ್ಷಾರ್ಥ ಉಡಾವಣೆಯನ್ನು ಈ ತಿಂಗಳಾಂತ್ಯಕ್ಕೆ ನಡೆಸಲಾಗುವುದು ಎಂದು ಇಸ್ರೋ ಕೆಲ ಚಿತ್ರಗಳನ್ನು ಸಹ ಬಿಡುಗಡೆ ಮಾಡಿದೆ.
ಮನುಷ್ಯನನ್ನು ಬಾಹ್ಯಾಕಾಶಕ್ಕೆ ಕಳಿಸುವ ಮುನ್ನ ಕೆಲವು ಅಂತರಾಷ್ಟ್ರೀಯ ಪ್ರಕ್ರಿಯೆ ಪಾಲಿಸಬೇಕಾಗುತ್ತದೆ. ಮನುಷ್ಯನನ್ನು ಆಕಾಶಕ್ಕೆ ಕರೆದುಕೊಂಡು ಹೋಗುವ ಯೂನಿಟ್‌ಗೆ ಪ್ಯಾಡ್ ಅಬಾಟ್ ಎಂದು ಕರೆಯಲಾಗುತ್ತದೆ. ಈ ಪ್ಯಾಡ್ ಅಬಾಟ್ ಅನ್ನು ರಾಕೆಟ್ ಇರಿಸಿ ಪ್ರಯೋಗ ಮಾಡಲಾಗುತ್ತಿದೆ. ಇದನ್ನೇ ಗಗನಯಾನ ‘ಟಿವಿ-ಡಿ1’ ಬಾಹ್ಯಾಕಾಶನೌಕೆ ಉಡ್ಡಯನ ಎನ್ನಲಾಗುತ್ತದೆ.
ವಿವಿಧ ಪರೀಕ್ಷೆಗಳನ್ನು ಕೈಗೊಳ್ಳುವುದರಿಂದ, ಕ್ರ‍್ಯೂ ಎಸ್ಕೇಪ್ ಸಿಸ್ಟಮ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಉದ್ದೇಶಿತ ರೀತಿಯಲ್ಲಿ ಕಾರ್ಯಾಚರಿಸುತ್ತವೆಯೇ ಎನ್ನುವುದು ಖಾತ್ರಿಯಾಗಲಿದೆ. ಇದು ಗಗನಯಾತ್ರಿಗಳ ಸುರಕ್ಷತೆಯನ್ನು ಖಚಿತಪಡಿಸುತ್ತದೆ.
ಪರೀಕ್ಷೆಗಳನ್ನು ನಡೆಸುವ ಮೂಲಕ ಮಾನವ ಸಹಿತ ಗಗನಯಾತ್ರೆ ಕೈಗೊಳ್ಳಲು ಅವಶ್ಯಕವಾದ ಜೀವ ಬೆಂಬಲ ವ್ಯವಸ್ಥೆ ಹಾಗೂ ಬಾಹ್ಯಾಕಾಶ ಕ್ಯಾಪ್ಸೂಲ್ ಸೇರಿದಂತೆ ವಿವಿಧ ಆಧುನಿಕ ತಂತ್ರಜ್ಞಾನಗಳ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯ.
ಸಮರ್ಪಕವಾಗಿ ಪರೀಕ್ಷೆಗಳನ್ನು ಕೈಗೊಳ್ಳುವುದರಿಂದ ಸಂಭಾವ್ಯ ಸಮಸ್ಯೆಗಳು ಹಾಗೂ ಅಪಾಯಗಳನ್ನು ಗುರುತಿಸಿ, ನೈಜ ಮಾನವ ಸಹಿತ ಯೋಜನಾ ಜಾರಿಗೂ ಮುನ್ನವೇ ಅದನ್ನು ಸರಿಪಡಿಸಲು ಸಾಧ್ಯ.
ಸಂಪೂರ್ಣ ಪರೀಕ್ಷೆಗಳನ್ನು ನಡೆಸುವುದರಿಂದ, ಗಗನಯಾತ್ರಿಗಳು ಮತ್ತು ಭೂ ಸಿಬ್ಬಂದಿಗೆ ಪರಿಪೂರ್ಣ ತರಬೇತಿ ಲಭಿಸುತ್ತದೆ. ಎಲ್ಲಾ ಉಪಕರಣಗಳನ್ನು, ಕಾರ್ಯಾಚರಣೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯ.
ಎಲ್ಲಾ ವ್ಯವಸ್ಥೆಗಳು ಸರಿಯಾದ ರೀತಿಯಲ್ಲಿ ಕಾರ್ಯಾಚರಿಸುತ್ತಿವೆ ಎಂದು ಖಾತ್ರಿಪಡಿಸಿಕೊಳ್ಳುವುದರಿಂದ ಯೋಜನೆಯ ಯಶಸ್ಸು ಸಾಧಿಸುವ ಸಾಧ್ಯತೆಗಳು ಹೆಚ್ಚಾಗಿ, ಗಗನಯಾನ ಯೋಜನೆಯ ಗುರಿಗಳನ್ನು ಸಾಧಿಸಲು ನೆರವಾಗುತ್ತದೆ.
ಈ ಮಾನವಸಹಿತ ಗಗನಯಾನಕ್ಕೂ ಮುನ್ನ ಮೂರು ಟೆಸ್ಟ್‌ಗಳಿದ್ದು, ಮುಂದಿನ ವರ್ಷ ಮತ್ತೊಂದು ಪರೀಕ್ಷಾರ್ಥ ಉಡಾವಣೆ ನಡೆಸಲಾಗುವುದು. ‘ವ್ಯೋಮ ಮಿತ್ರ’ ಹೆಸರಿನ ಮಹಿಳಾ ರೊಬೋಟ್ ಅನ್ನು ಕಳುಹಿಸಲಾಗುವುದು ಎಂದು ಇಸ್ರೋ ಹೇಳಿದೆ. ನಂತರ ಗಗನಯಾನಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಪ್ಲಾನ್ ಮಾಡಿದೆ.





