Mysore
30
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

25 ಸಂಸದರನ್ನು ಗೆಲ್ಲಿಸಿದ ಕರುನಾಡಿಗೆ ಈ ದ್ರೋಹ ನ್ಯಾಯವೇ?: ಪ್ರಧಾನಿಗೆ ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು : ‘ಶ್ರಮಜೀವಿ ಕನ್ನಡಿಗರು ಕೇಂದ್ರಕ್ಕೆ 1 ರೂ .ತೆರಿಗೆ ಪಾವತಿಸಿದರೆ ಮರಳಿ ನಮ್ಮ ಕೈಸೇರುವುದು 15ಪೈಸೆ ಮಾತ್ರ. ಪ್ರಧಾನಿ ಮೋದಿ ಅವರೇ, ಬರ, ನೆರೆ ಬಂದರೂ ಸೂಕ್ತ ನೆರವು ಸಿಗಲಿಲ್ಲ, ಕೊರೊನ ಕಾಲದಲ್ಲೂ ನೀವು ಕನ್ನಡಿಗರ ಕೈ ಹಿಡಿಯಲಿಲ್ಲ, 25 ಬಿಜೆಪಿ ಸಂಸದರನ್ನು ಗೆಲ್ಲಿಸಿದ ಕರುನಾಡಿಗೆ ಈ ದ್ರೋಹ ನ್ಯಾಯವೇ? ಕೇಂದ್ರ ಬಿಜೆಪಿ ಸರಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಇದು ನನ್ನ ಪ್ರಶ್ನೆ ಮಾತ್ರವಲ್ಲ, ನಾಡಿನ ಆರೂವರೆ ಕೋಟಿ ಸ್ವಾಭಿಮಾನಿ ಕನ್ನಡಿಗರ ಪ್ರಶ್ನೆ ಉತ್ತರಿಸಿ ಮೋದಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಭಾನುವಾರ ಎಕ್ಸ್ (ಟ್ವಿಟರ್)ನಲ್ಲಿ ಸರಣಿ ಪೋಸ್ಟ್ ಹಾಕಿರುವ ಸಿದ್ದರಾಮಯ್ಯ, ‘ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕಾದ ನಷ್ಟ ತುಂಬಿಕೊಡಲು 15ನೆ ಹಣಕಾಸು ಆಯೋಗ ಕರ್ನಾಟಕಕ್ಕೆ 5,495 ಕೋಟಿ ರೂ.ವಿಶೇಷ ಅನುದಾನ ನೀಡುವಂತೆ ಶಿಫಾರಸು ಮಾಡಿತ್ತು. ನಮ್ಮದೇ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿ, ವಿತ್ತ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಶಿಫಾರಸನ್ನು ತಿರಸ್ಕರಿಸಿ, ನಾಡದ್ರೋಹ ಎಸಗಿದರು. ಪ್ರಧಾನಿ ಮೋದಿ ಅವರೇ, ಮೋದಿ ಮುಖ ನೋಡಿ ಮತನೀಡಿ ಎನ್ನುವ ನಿಮ್ಮವರ ಅನ್ಯಾಯಕ್ಕೆ ಕನ್ನಡಿಗರು ಯಾರ ಬಳಿ ನ್ಯಾಯ ಕೇಳಬೇಕು?’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಯುಪಿಎ ಸರ್ಕಾರದ ಅವಧಿಯ 14ನೆ ಹಣಕಾಸು ಆಯೋಗ ನಿಗದಿಪಡಿಸಿದ್ದ ತೆರಿಗೆ ಪಾಲು ಶೇ.4.72ರಷ್ಟಕ್ಕೆ ಕತ್ತರಿ ಹಾಕಿ, ನಿಮ್ಮ ಸರ್ಕಾರದ ಅವಧಿಯ 15ನೆ ಹಣಕಾಸು ಆಯೋಗವು ಶೇ.3.64ಕ್ಕೆ ಇಳಿಸಿದೆ. ಪ್ರಧಾನಿ ಮೋದಿ ಅವರೇ, ಕನ್ನಡಿಗರಿಗೆ ಸಿಗಬೇಕಿದ್ದ 45ಸಾವಿರ ಕೋಟಿ ರೂ.ತೆರಿಗೆ ಹಣ ವಂಚಿಸಿದವರು ನೀವೇ ಅಲ್ಲವೇ?’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

‘ಕೇಂದ್ರ ಪ್ರಾಯೋಜಕತ್ವದ ಹಲವು ಜನಪರ ಯೋಜನೆಗಳ ಅನುದಾನಕ್ಕೆ ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಕೊಕ್ಕೆ ಹಾಕಿದ್ದರಿಂದ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪದೆ ಸಂಕಷ್ಟದಲ್ಲಿದ್ದಾರೆ. ಮೋದಿ ಅವರೇ, ಕನ್ನಡಿಗರ ಪಾಲಿನ ಅನುದಾನ ಕತ್ತರಿಸಿ ಅದಾನಿಯ ಕೈಗಿತ್ತರೆ ದೇಶ ಅಭಿವೃದ್ಧಿ ಆಗುವುದೇ?’ ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

‘ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳಾಗುತ್ತಾ ಬಂತು, ಕೇಂದ್ರ ಸರ್ಕಾರದ ಪಾಲುದಾರಿಕೆಯ ವಿವಿಧ 61 ಯೋಜನೆಗಳಿಗೆ ಸಂಬಂಧಿಸಿದಂತೆ 23 ಇಲಾಖೆಗಳಿಗೆ ಕೇಂದ್ರದಿಂದ ನಯಾಪೈಸೆ ಹಣ ಬಂದಿಲ್ಲ. ಪ್ರಧಾನಿ ಮೋದಿ ಅವರೇ, ಉದ್ಯಮಿಗಳ ಲಕ್ಷಾಂತರ ಕೋಟಿ ರೂ. ಸಾಲಮನ್ನಾ ಮಾಡುವ ನಿಮ್ಮ ಸರ್ಕಾರಕ್ಕೆ ಕನ್ನಡಿಗರ ಕಲ್ಯಾಣ ಕಾರ್ಯಕ್ರಮಗಳು ಹೊರೆಯಾದವೇ? ರಾಜ್ಯದಲ್ಲಿ ಬಿಜೆಪಿ ಸೋತರೆ ಕೇಂದ್ರದ ಯೋಜನೆಗಳು ಬಂದ್ ಆಗಲಿದೆ ಎಂದು ಜೆ.ಪಿ.ನಡ್ಡಾ ಹೇಳಿದ್ದರು, ಅವರು ಆಡಿದ್ದನ್ನು ನೀವು ಮಾಡಿ ತೋರಿಸುತ್ತಿದ್ದೀರಾ?’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕೇಂದ್ರ ಸರ್ಕಾರದ ನಿರ್ಲಕ್ಷ್ಯದ ಕಾರಣಕ್ಕೆ ರಾಜ್ಯದ ಹಲವು ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಪ್ರಧಾನಿ ಮೋದಿ ಅವರು ಕನ್ನಡಿಗರ ಬಗೆಗೆ ತಳೆದಿರುವ ಮಲತಾಯಿ ಧೋರಣೆಯಿಂದಾಗಿ ಅನ್ನದಾತರ ಬದುಕು ಸಂಕಷ್ಟದಲ್ಲಿದೆ. ರಾಜ್ಯದ ನೀರಾವರಿ ಯೋಜನೆಗಳ ಅನುಷ್ಠಾನ ಪೂರ್ಣಗೊಂಡು, ಕನ್ನಡಿಗರ ಬದುಕು ಹಸನಾಗುವುದು ಎಂದು? ಉತ್ತರ ಕೊಡಿ ಮೋದಿ’ ಎಂದು ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.

https://x.com/siddaramaiah/status/1718580959430480231?s=20

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ