ಬೆಂಗಳೂರು : ಬಿಜೆಪಿಯಲ್ಲಿ ವಿರೋಧ ಪಕ್ಷ ನಾಯಕನಾಗಲು ಯೋಗ್ಯತೆ ಇರುವ ಒಂದೇ ಒಂದು ಮನುಷ್ಯಾಕೃತಿಯೂ ಇಲ್ಲವೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬಸನಗೌಡ ಪಾಟೀಲ್ ಯತ್ನಾಳ್ ಬಾಯಿ ತೆರೆದರೆ ಹೊಲಸು ಮಾತುಗಳು, ಆರ್.ಅಶೋಕ್‍ಗೆ ತಾನೇನು ಮಾತಾಡುತ್ತೇನೆ ಎಂಬ ಅರಿವು ಅವರಿಗೇ ಇರುವುದಿಲ್ಲ. ಡಾ.ಸಿ.ಎನ್.ಅಶ್ವಥ್‍ನಾರಾಯಣರಿಗೆ ಸದಾ ಗಂಡಸ್ಥನದ ಬಗ್ಗೆಯೇ ಚಿಂತೆ. ಪ್ರತಾಪ್ ಸಿಂಹನನ್ನೇ ಎದುರಿಸಲಾಗದ ಬಸವರಾಜ ಬೊಮ್ಮಾಯಿ ಇನ್ನೂ ಸಿದ್ದರಾಮಯ್ಯರನ್ನು ಎದುರಿಸಲು ಸಾಧ್ಯವೇ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಬಿಜೆಪಿಯಲ್ಲಿ ಈಗ ಸೋಲಿನ ಆತ್ಮಾವಲೋಕನದ ಹೆಸರಲ್ಲಿ ಸಂತೋಷ ಕೂಟ ಹಾಗೂ ಬಿ.ಎಸ್.ಯಡಿಯೂರಪ್ಪ ಕೂಟದ ನಡುವೆ ಒಬ್ಬರನ್ನೊಬ್ಬರು ಸೋಲಿಸುವ ಅವಲೋಕನ ನಡೆಯುತ್ತಿದೆ. ಈ ಸೋಲಿನ ಅವಲೋಕನಾ ಸಭೆಗಳಿಗೆ ಜೋಶಿ, ಸಂತೋಷ್ ಅವರುಗಳು ಭಾಗವಹಿಸದೆ, ತಮ್ಮ ಶಿಷ್ಯಪಡೆಯನ್ನು ಮುಂದೆ ಬಿಟ್ಟಿರುವುದೇಕೆ ಎಂದು ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿದೆ. ಬಿಜೆಪಿ ಹೀನಾಯ ಸೋಲಿಗೆ ಅವರಿಬ್ಬರೇ ಕಾರಣರಲ್ಲವೇ, ಅವರೇ ಇಲ್ಲದಿದ್ದರೆ ಹೇಗೆ ಎಂದು ಕಾಂಗ್ರೆಸ್ ಅಣಕವಾಡಿದೆ.
ಬಿಜೆಪಿಯ ಒಂದು ಬಣ ಹೊಂದಾಣಿಕೆ ರಾಜಕೀಯದಿಂದ ನಮಗೆ ಸೋಲಾಯಿತು ಎನ್ನುತ್ತಿದೆ. ಮತ್ತೊಂದು ಬಣ ಕಾಂಗ್ರೆಸ್ ಗ್ಯಾರಂಟಿಗಳಿಂದ ನಮಗೆ ಸೋಲಾಯ್ತು ಎನ್ನುತ್ತಿದೆ. ಎರಡೂ ಬಣದವರು ಸತ್ಯ ಹೇಳಲು, ಒಪ್ಪಿಕೊಳ್ಳಲು ತಯಾರಿಲ್ಲ. ಶೇ.40ರಷ್ಟು ಕಮಿಷನ್ ಭ್ರಷ್ಟಾಚಾರದಿಂದ, ದುರಾಡಳಿತದಿಂದ, ಜನಪರ ಚಿಂತನೆಗಳು ಇಲ್ಲದಿರುವುದರಿಂದ, ಹಗರಣಗಳಿಂದ ಸೋಲಾಗಿದ್ದನ್ನು ಒಪ್ಪಿಕೊಳ್ಳದಿದ್ದರೆ ಬಿಜೆಪಿಯದ್ದು ಆತ್ಮಾವಲೋಕನ ಆಗುವುದಿಲ್ಲ, ಆತ್ಮ ವಂಚಕತನೆ ಆಗುತ್ತದೆ ಎಂದು ಕಾಂಗ್ರೆಸ್ ಎಚ್ಚರಿಸಿದೆ.





