Mysore
20
overcast clouds
Light
Dark

ಭಾರತದ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಶಾಹಿದ್ ಲತೀಫ್ ಪಾಕಿಸ್ತಾನದಲ್ಲಿ ಹತ್ಯೆ

ಇಸ್ಲಾಮಾಬಾದ್‌ : ಪಠಾಣ್ ಕೋಟ್ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಶಾಹಿದ್ ಲತೀಫ್‌ನನ್ನು (41) ಬುಧವಾರ ಪಾಕಿಸ್ತಾನದ ಸಿಯಾಲ್ ಕೋಟ್‌ನಲ್ಲಿ ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ವರದಿಯಾಗಿದೆ.

ಲತೀಫ್ ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಸದಸ್ಯನಾಗಿದ್ದು, 2016ರ ಜನವರಿ 2 ರಂದು ಪ್ರಾರಂಭವಾದ ಪಠಾಣ್ ಕೋಟ್ ದಾಳಿಯ ಪ್ರಮುಖ ಸಂಚುಕೋರನಾಗಿದ್ದ. ಆತ ಸಿಯಾಲ್‌ಕೋಟ್‌ನಲ್ಲಿ ದಾಳಿಯನ್ನು ನಡೆಸಲು ಸಂಘಟಿಸಿ, ಅದನ್ನು ಕಾರ್ಯಗತಗೊಳಿಸಲು ನಾಲ್ವರು ಭಯೋತ್ಪಾದಕರನ್ನು ಪಠಾಣ್ ಕೋಟ್‌ಗೆ ಕಳುಹಿಸಿದ್ದ.

ಕಾನೂನುಬಾಹಿರ ಚಟುವಟಿಕೆಗಳ ಕಾಯಿದೆಯ ಅಡಿಯಲ್ಲಿ ಭಯೋತ್ಪಾದನೆಯ ಆರೋಪದ ಮೇಲೆ ನವೆಂಬರ್ 1994 ರಲ್ಲಿ ಆತನನ್ನು ಭಾರತದಲ್ಲಿ ಬಂಧಿಸಲಾಗಿತ್ತು. ಆತನನ್ನು ವಿಚಾರಣೆಗೆ ಒಳಪಡಿಸಿ, ಜೈಲಿಗೆ ಹಾಕಲಾಗಿತ್ತು. ಭಾರತದಲ್ಲಿ ಶಿಕ್ಷೆ ಅನುಭವಿಸಿದ ನಂತರ ಆತನನ್ನು 2010 ರಲ್ಲಿ ವಾಘಾ ಗಡಿ ಮೂಲಕ ಪಾಕಿಸ್ತಾನಕ್ಕೆ ಗಡೀಪಾರು ಮಾಡಲಾಯಿತು.

1999ರಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನ ಅಪಹರಣ ಪ್ರಕರಣದಲ್ಲೂ ಲತೀಫ್ ಆರೋಪಿಯಾಗಿದ್ದ. 2010 ರಲ್ಲಿ ಬಿಡುಗಡೆಯಾದ ನಂತರ ಲತೀಫ್ ಪಾಕಿಸ್ತಾನದ ಜಿಹಾದಿ ಸಂಘಟನೆಗೆ ಹಿಂತಿರುಗಿದ್ದ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಹೇಳಿದೆ. ಭಾರತ ಸರ್ಕಾರ ಆತನನ್ನು ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ