ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆ ದಾಟಲು ಯತ್ನಿಸಿದ ಮೂವರು ಭಯೋತ್ಪಾದಕರನ್ನು ಶನಿವಾರ ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಭಯೋತ್ಪಾದಕರು ತಪ್ಪಿಸಿಕೊಳ್ಳಲು ಪಾಕಿಸ್ತಾನಿ ಸೈನಿಕರು ನೆರವಿಗೆ ಯತ್ನಿಸಿದ್ದರು ಎಂದು ಭಾರತೀಯ ಸೇನೆ ಹೇಳಿದೆ.
ಉಗ್ರರ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಲು ಇಂಟೆಲ್ ಆಧಾರದ ಮೇಲೆ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಪೀರ್ ಪಂಜಾಲ್ ಬ್ರಿಗೇಡ್‌ನ ಕಮಾಂಡರ್ ಬ್ರಿಗೇಡಿಯರ್ ಪಿಎಂಎಸ್ ಧಿಲ್ಲೋನ್ ತಿಳಿಸಿದ್ದಾರೆ.
ಮೂವರು ಭಯೋತ್ಪಾದಕರು ಒಳನುಸುಳಲು ಪ್ರಯತ್ನಿಸಿದರು. ಮೊದಲು ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಯಿತು. ನಂತರ ಮೂರನೇ ಭಯೋತ್ಪಾದಕನನ್ನು ಹತ್ಯೆ ಮಾಡಲಾಯಿತು. ಆರಂಭದಲ್ಲಿ ಭಯೋತ್ಪಾದಕರು ತಪ್ಪಿಸಿಕೊಳ್ಳುವುದಕ್ಕೆ ನೆರವಾಗಲು ಪಾಕ್ ಸೈನಿಕರು ಮುಂದಾದರು. ಆದರೆ ಅವರ ಪ್ರಯತ್ನಿ ವಿಫಲವಾಯಿತು. ಅಷ್ಟರೊಳಗೆ ಭಯೋತ್ಪಾದಕರನ್ನು ಭಾರತೀಯ ಸೇನೆ ಹೊಡೆದುರುಳಿಸಿತು. ಭಯೋತ್ಪಾದಕರ ಮೃತದೇಹವನ್ನು ಪಡೆಯಲು ಎಲ್ಒಸಿ ಸಮೀಪದಲ್ಲಿ ಪಾಕ್ ಸೈನಿಕರು ಗುಂಡಿನ ದಾಳಿ ನಡೆಸಿದ್ದರು ಎಂದು ಸೇನೆ ತಿಳಿಸಿದೆ.
ಭಯೋತ್ಪಾದಕರ ಬಳಿಯಿದ್ದ ಎರಡು ಎಕೆ ರೈಫಲ್, ಒಂದು ಪಿಸ್ತೂಲ್, ಏಳು ಹ್ಯಾಂಡ್ ಗ್ರೆನೇಡ್, ಒಂದು ಸುಧಾರಿತ ಸ್ಫೋಟಕ ಸಾಧನ (ಐಇಡಿ), ಪಾಕಿಸ್ತಾನದ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನೆ ತಿಳಿಸಿದೆ.
2021ರ ಫೆಬ್ರವರಿಯಲ್ಲಿ, ಗಡಿಗಳಲ್ಲಿ ಪರಸ್ಪರ ಶಾಂತಿ ಸಾಧಿಸುವ ಹಿತಾಸಕ್ತಿಯಿಂದ ಭಾರತ ಮತ್ತು ಪಾಕಿಸ್ತಾನದ ಸೇನೆಗಳು ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಗುಂಡಿನ ದಾಳಿಯನ್ನು ನಿಲ್ಲಿಸಲು ಒಪ್ಪಿಕೊಂಡಿದ್ದವು. ಆದರೆ ಈಗ ಮತ್ತೆ ಅಶಾಂತಿ ವಾತಾವರಣ ಸೃಷ್ಟಿಯಾಗಿದೆ. ಅನಂತನಾಗ್ ಜಿಲ್ಲೆಯಲ್ಲಿ ನಡೆಯುತ್ತಿರುವ ಎನ್‌ಕೌಂಟರ್ ಶನಿವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಎನ್‌ಕೌಂಟರ್‌ನಲ್ಲಿ ನಾಲ್ವರು ಭದ್ರತಾ ಪಡೆ ಸಿಬ್ಬಂದಿ ಹುತಾತ್ಮರಾಗಿದ್ದಾರೆ.