Mysore
24
haze

Social Media

ಭಾನುವಾರ, 21 ಡಿಸೆಂಬರ್ 2025
Light
Dark

IND vs SA 2nd T20: ಭಾರತದ ವಿರುದ್ಧ ಜಯ ಸಾಧಿಸಿ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡ ಹರಿಣಗಳು

ಟೀಮ್‌ ಇಂಡಿಯಾ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಿರತವಾಗಿದ್ದು ಮೊದಲಿಗೆ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಆರಂಭವಾಗಿದೆ. ಡಿಸೆಂಬರ್‌ 10ರಂದು ನಡೆದ ಮೊದಲ ಪಂದ್ಯ ಮಳೆ ಕಾರಣದಿಂದಾಗಿ ಟಾಸ್‌ ಕೂಡ ಆಗದೇ ರದ್ದಾಗಿತ್ತು. ಇಂದು ( ಡಿಸೆಂಬರ್‌ 12 ) ಎರಡನೇ ಟಿ ಟ್ವೆಂಟಿ ಪಂದ್ಯ ಜಿಕೆಬರ್ಹಾದ ಸೇಂಟ್‌ ಜಾರ್ಜ್‌ ಪಾರ್ಕ್‌ನಲ್ಲಿ ನಡೆದಿದ್ದು, ಈ ಪಂದ್ಯಕ್ಕೂ ಸಹ ಮಳೆ ಅಡ್ಡಿ ಉಂಟುಮಾಡಿದ ಕಾರಣ ಪಂದ್ಯದ ಎರಡನೇ ಇನ್ನಿಂಗ್ಸ್‌ ಅನ್ನು 15 ಓವರ್‌ಗಳಿಗೆ ಮೊಟಕುಗೊಳಿಸಲಾಗಿತ್ತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ 19.3 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 180 ರನ್‌ ಕಲೆಹಾಕಿತ್ತು. 19.3 ಓವರ್‌ ಬಳಿಕ ಮಳೆ ಬಂದ ಕಾರಣ ಇನ್ನಿಂಗ್ಸ್‌ ಅನ್ನು ಮೊಟಕುಗೊಳಿಸಲಾಯಿತು. ಡೆಕ್‌ವರ್ತ್‌ ಲೂಯಿಸ್‌ ನಿಯಮದ ಪ್ರಕಾರ ದಕ್ಷಿಣ ಆಫ್ರಿಕಾ ಗೆಲ್ಲಲು 15 ಓವರ್‌ಗಳಲ್ಲಿ 152 ರನ್‌ಗಳನ್ನು ಬಾರಿಸಬೇಕಾಯಿತು.

ಈ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ 13.5 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 154 ರನ್‌ ಕಲೆಹಾಕಿ 5 ವಿಕೆಟ್‌ಗಳ ಗೆಲುವು ಸಾಧಿಸುವುದರ ಮೂಲಕ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ 1-0 ಅಂತರ ಮುನ್ನಡೆ ಕಾಯ್ದುಕೊಂಡಿದೆ.

ಟೀಮ್‌ ಇಂಡಿಯಾ ಇನ್ನಿಂಗ್ಸ್: ಭಾರತದ ಪರ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್‌ ಹಾಗೂ ಶುಭ್‌ಮನ್‌ ಗಿಲ್‌ ಡಕ್‌ಔಟ್‌ ಆದ ಕಾರಣ ತಂಡ 2 ಓವರ್‌ಗಳಲ್ಲಿ ಕೇವಲ 6 ರನ್‌ಗೆ 2 ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತಿಲಕ್‌ ವರ್ಮಾ ಹಾಗೂ ನಾಯಕ ಸೂರ್ಯಕುಮಾರ್‌ ಯಾದವ್‌ ಜತೆಗೂಡಿ ತಂಡದ ಮೊತ್ತ ಸುಧಾರಿಸುವ ಹಾಗೆ ಮಾಡಿದರು. ತಿಲಕ್‌ ವರ್ಮಾ 29 ರನ್‌ ಬಾರಿಸಿದರೆ, ಸೂರ್ಯಕುಮಾರ್‌ ಯಾದವ್‌ 36 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 5 ಬೌಂಡರಿ ಸಹಿತ 56 ರನ್‌ ಬಾರಿಸಿದರು. ಈ ಪಂದ್ಯದಲ್ಲಿಯೂ ಅಬ್ಬರಿಸಿದ ರಿಂಕು ಸಿಂಗ್‌ 39 ಎಸೆತಗಳಲ್ಲಿ 2 ಸಿಕ್ಸರ್‌ ಹಾಗೂ 9 ಬೌಂಡರಿ ಸಹಿತ 68 ರನ್‌ ಬಾರಿಸಿದರು. ಇನ್ನುಳಿದಂತೆ ರವೀಂದ್ರ ಜಡೇಜಾ 19 ರನ್‌, ಜಿತೇಶ್‌ ಶರ್ಮಾ 1 ರನ್‌, ಅರ್ಷ್‌ದೀಪ್‌ ಸಿಂಗ್ ಡಕ್‌ಔಟ್‌, ಮೊಹಮ್ಮದ್‌ ಸಿರಾಜ್‌ ಯಾವುದೇ ರನ್‌ ಗಳಿಸದೇ ಅಜೇಯರಾಗಿ ಉಳಿದರು.

ದಕ್ಷಿಣ ಆಫ್ರಿಕಾ ಇನ್ನಿಂಗ್ಸ್:‌ ದಕ್ಷಿಣ ಆಫ್ರಿಕಾದ ಪರ ಆರಂಭದಲ್ಲಿ ಅಬ್ಬರಿಸಿದ ರೀಜಾ ಹೆಂಡ್ರಿಕ್ಸ್‌ 49, ಮ್ಯಾಥ್ಯೂ ಬ್ರೀಟ್ಜ್ಕಿ 16, ಏಡನ್‌ ಮಾರ್ಕ್ರಮ್‌ 30, ಹೆನ್‌ರಿಚ್‌ ಕ್ಲಾಸೀನ್‌ 7, ಡೇವಿಡ್‌ ಮಿಲ್ಲರ್‌ 17, ಟ್ರಿಸ್ಟನ್‌ ಸ್ಟಬ್ಸ್‌ ಅಜೇಯ 14 ಹಾಗೂ ಆಂಡಿಲ್‌ ಫೆಹ್ಲುಕ್ವಾಯೊ ಅಜೇಯ 10 ರನ್‌ ಗಳಿಸಿದರು.

ಭಾರತದ ಪರ ಮುಖೇಶ್‌ ಕುಮಾರ್‌ 2 ವಿಕೆಟ್‌ ಹಾಗೂ ಕುಲ್‌ದೀಪ್‌ ಯಾದವ್‌ ಮತ್ತು ಮೊಹಮ್ಮದ್‌ ಸಿರಾಜ್‌ ತಲಾ ಒಂದೊಂದು ವಿಕೆಟ್‌ ಪಡೆದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!