Mysore
19
mist

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

IND vs AFG 3rd T20: ಸೂಪರ್ ಓವರ್‌ಗಳ ರೋಚಕ ಪಂದ್ಯದಲ್ಲಿ ಗೆದ್ದ ಭಾರತ

ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ( ಜನವರಿ 17 ) ನಡೆದ ರೋಚಕ ಮೂರನೇ ಟಿ 20 ಪಂದ್ಯ ಟೈ ಆದ ಕಾರಣ ಸೂಪರ್ ಓವರ್ ನಡೆದಿದ್ದು, ಅದೂ ಸಹ ಟೈ ಆಗಿ ಮತ್ತೊಂದು ಸೂಪರ್ ಓವರ್ ನಡೆದಿದೆ. ಎರಡನೇ ಸೂಪರ್ ಓವರ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಭಾರತ 10 ರನ್ ಗಳ ಗೆಲುವನ್ನು ದಾಖಲಿಸಿ 3 ಪಂದ್ಯಗಳ ಟಿ 20 ಸರಣಿಯಲ್ಲಿ ವೈಟ್ ವಾಷ್ ಸಾಧನೆ ಮಾಡಿದೆ‌. 

ಮೊದಲು ಬ್ಯಾಟಿಂಗ್ ಮಾಡಿದ ಭಾರತ ರೋಹಿತ್ ಶರ್ಮಾ ಅಬ್ಬರದ ಶತಕ ಹಾಗೂ ರಿಂಕು ಸಿಂಗ್ ಆಕ್ರಮಣಕಾರಿ ಆಟದ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿ ಎದುರಾಳಿ ಅಫ್ಘಾನಿಸ್ತಾನ ತಂಡಕ್ಕೆ ಗೆಲ್ಲಲು 213 ರನ್ ಗಳ ಗುರಿ ನೀಡಿತ್ತು.

ಈ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ಅಫ್ಘಾನಿಸ್ತಾನ ಅಂತಿಮ ಎಸೆತದವರೆಗೂ ದಿಟ್ಟ ಹೋರಾಟ ನಡೆಸಿತು.‌ ರಹ್ಮನ್ನುಲ್ಲಾ ಗುರ್ಬಜ್ ಹಾಗೂ ಇಬ್ರಾಹಿಂ ಜದ್ರನ್ ಉತ್ತಮ‌ ಆಟದಿಂದ ಒಳ್ಳೆಯ ಆರಂಭ ಪಡೆದುಕೊಂಡಿದ್ದ ತಂಡವನ್ನು ಮೊಹಮ್ಮದ್ ನಬಿ ಹಾಗೂ ಗುಲ್ಬದಿನ್ ನೈಬ್ ಗೆಲುವಿನ ಸನಿಹಕ್ಕೆ ತಂದಿತ್ತು‌. ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಈ ಮೂಲಕ ಪಂದ್ಯ ಟೈ ಆಗಿ ಸೂಪರ್ ಓವರ್ ನಡೆಯಿತು.

ಮೊದಲ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 16 ರನ್ ಗಳಿಸಿ ಭಾರತಕ್ಕೆ 17 ರನ್ ಗುರಿ ನೀಡಿತು. ಗುರ್ಬಜ್ ಬೌಂಡರಿ ಹಾಗೂ ನಬಿ ಸಿಕ್ಸರ್ ಬಾರಿಸುವ ಮೂಲಕ ಸೂಪರ್ ಓವರ್‌ನಲ್ಲೂ ಅಬ್ಬರಿಸಿದರು. ಇತ್ತ ಭಾರತ ಸೂಪರ್ ಓವರ್‌ನಲ್ಲಿ 16 ಗಳಿಸಿದ್ದು, ಪಂದ್ಯ ಮತ್ತೆ ಡ್ರಾಗೊಂಡು ಮತ್ತೊಂದು ಸೂಪರ್ ಓವರ್ ನಡೆದಿದೆ.

ಭಾರತದ ಪರ ಸೂಪರ್ ಓವರ್‌ನಲ್ಲಿ ರೋಹಿತ್ ಹಾಗೂ ಜೈಸ್ವಾಲ್ ಕಣಕ್ಕಿಳಿದರು. ಮೊದಲ ಎಸೆತದಲ್ಲಿ ರೋಹಿತ್ 1, ಎರಡನೇ ಎಸೆತದಲ್ಲಿ ಜೈಸ್ವಾಲ್ 1 ರನ್ ಬಾರಿಸಿದರೆ, 3 ಹಾಗೂ 4ನೇ ಎಸೆತಗಳಲ್ಲಿ ರೋಹಿತ್ ಸಿಕ್ಸರ್ ಚಚ್ಚಿದರು ಹಾಗೂ 5 ನೇ ಎಸೆತದಲ್ಲಿ 1 ರನ್ ಕಲೆ ಹಾಕಿದರು.‌ ಅಂತಿಮವಾಗಿ 1 ಎಸೆತಕ್ಕೆ 2 ರನ್ ಬೇಕಿದ್ದಾಗ ಜೈಸ್ವಾಲ್ 1 ರನ್ ಗಳಿಸಿದರು.

ಹೀಗೆ ಮೊದಲ ಸೂಪರ್ ಓವರ್ ಟೈ ಆದ ಬಳಿಕ ಎರಡನೇ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 5 ಎಸೆತಗಳಲ್ಲಿ 11 ರನ್ ಗಳಿಸಿ ಆಲ್ ಔಟ್ ಆಗಿ ಅಫ್ಘಾನಿಸ್ತಾನಕ್ಕೆ 12 ರನ್ ಗುರಿ ನೀಡಿತು. ತಂಡದ ಪರ ರೋಹಿತ್ 1 ಸಿಕ್ಸರ್, 1 ಬೌಂಡರಿ, 1 ರನ್ ಬಾರಿಸಿದರು‌. ಅತ್ತ ಅಫ್ಘಾನಿಸ್ತಾನ ಮೊದಲ ಎಸೆತದಲ್ಲಿ ನಬಿ ಹಾಗೂ ಮೂರನೇ ಎಸೆತದಲ್ಲಿ ಗುರ್ಬಜ್ ಕಳೆದುಕೊಂಡು ಕೇವಲ 1 ರನ್ ಗೆ ಆಲ್ ಔಟ್ ಆಯಿತು. ಈ ಮೂಲಕ ಭಾರತದ ಎರಡನೇ ಸೂಪರ್ ಓವರ್‌ನಲ್ಲಿ 10 ರನ್ ಗಳ ಗೆಲುವು ದಾಖಲಿಸಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!