ಸದ್ಯ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ 3 ಪಂದ್ಯಗಳು ಮುಕ್ತಾಯವಾಗಿದ್ದು ಇಂದು ( ಡಿಸೆಂಬರ್ 1 ) ನಾಲ್ಕನೇ ಪಂದ್ಯ ಜರುಗುತ್ತಿದೆ. ಮೊದಲ ಹಾಗೂ ಎರಡನೇ ಪಂದ್ಯದಲ್ಲಿ ಭಾರತ ಜಯ ಸಾಧಿಸಿದ್ದರೆ, ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದು ಟೂರ್ನಿ ಗೆಲ್ಲುವ ಕನಸನ್ನು ಜೀವಂತವಾಗಿಸಿಕೊಂಡಿತ್ತು.
ಹೀಗಾಗಿ ಇಂದಿನ ಪಂದ್ಯದಲ್ಲಿ ಭಾರತ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದ್ದು, ಒಂದುವೇಳೆ ಆಸ್ಟ್ರೇಲಿಯಾ ಗೆದ್ದರೆ ಸರಣಿ ಸಮಬಲವಾಗಲಿದೆ. ಈ ಪಂದ್ಯ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತ್ತು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ ಆಸ್ಟ್ರೇಲಿಯಾಗೆ ಗೆಲ್ಲಲು 175 ರನ್‌ಗಳ ಗುರಿ ನೀಡಿದೆ.
ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಹಾಗೂ ರುತುರಾಜ್ ಗಾಯಕ್ವಾಡ್ ಜೋಡಿ ಪವರ್‌ಪ್ಲೇನಲ್ಲಿ 50 ರನ್‌ಗಳ ಜತೆಯಾಟ ಆಡುವ ಮೂಲಕ ಉತ್ತಮ ಆರಂಭವನ್ನು ಕಟ್ಟಿಕೊಟ್ಟಿತು. ಯಶಸ್ವಿ ಜೈಸ್ವಾಲ್ 37 ರನ್ ಗಳಿಸಿದರೆ, ರುತುರಾಜ್ ಗಾಯಕ್ವಾಡ್ 32 ರನ್ ಕಲೆಹಾಕಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶ್ರೇಯಸ್ ಅಯ್ಯರ್ 8 ರನ್, ನಾಯಕ ಸೂರ್ಯಕುಮಾರ್ ಕೇವಲ 1 ರನ್ ಗಳಿಸಿ ನಿರಾಸೆ ಮೂಡಿಸಿದರು. ಬಳಿಕ ಅಬ್ಬರಿಸಿದ ಜಿತೇಶ್ ಶರ್ಮಾ 19 ಎಸೆತಗಳಲ್ಲಿ 3 ಸಿಕ್ಸರ್, 1 ಬೌಂಡರಿ ಸಹಿತ 35 ರನ್, ರಿಂಕು ಸಿಂಗ್ 29 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 46 ರನ್ ಬಾರಿಸಿದರು. ಅಕ್ಷರ್ ಪಟೇಲ್ ಹಾಗೂ ದೀಪಕ್ ಚಹರ್ ಶೂನ್ಯ ಸುತ್ತಿದರೆ, ರವಿ ಬಿಷ್ಣೋಯಿ 4 ಹಾಗೂ ಅವೇಶ್ ಖಾನ್ ಅಜೇಯ 1 ರನ್ ಕಲೆಹಾಕಿದರು.





