Mysore
26
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಸಮಾನ ನಾಗರಿಕ ಸಂಹಿತೆ ಜಾರಿ ಅತ್ಯಗತ್ಯ: ಪ್ರಧಾನಿ ಮೋದಿ ಹೇಳಿಕೆಗೆ ಸಿಡಿದೆದ್ದ ವಿಪಕ್ಷಗಳು!

ನವದೆಹಲಿ: ಏಕರೂಪ ನಾಗರಿಕ ಸಂಹಿತೆ ಭಾರತಕ್ಕೆ ಅತ್ಯಗತ್ಯ ಎಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೇಳಿಕೆಗೆ ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ದೇಶದಲ್ಲಿ ಎರಡೆರಡು ಕಾನೂನು ಏಕೆ ಎಂದು ಪ್ರಧಾನಿ ಮೋದಿ ಅವರು ಪ್ರಶ್ನಿಸಿದ್ದರು. ಪ್ರಧಾನಿಗಳ ಈ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್, ಪ್ರಧಾನಿ ಮೋದಿ ಅವರು ಮೊದಲು ದೇಶವನ್ನು ಕಾಡುತ್ತಿರುವ ಬಡತನ, ಬೆಲೆ ಏರಿಕೆ ಹಾಗೂ ನಿರುದ್ಯೋಗ ಸಮಸ್ಯೆ ಬಗೆಹರಿಸಲಿ, ಈ ಪ್ರಶ್ನೆಗಳಿಗೆ ಮೊದಲು ಉತ್ತರ ಹುಡುಕಲಿ ಎಂದು ಹೇಳಿದ್ದಾರೆ.

ಮಣಿಪುರ ವಿಚಾರವಾಗಿ ಪ್ರಧಾನಿ ಮೋದಿ ಅವರು ಈವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ಇಡೀ ರಾಜ್ಯವೇ ಹೊತ್ತಿ ಉರಿಯುತ್ತಿದೆ. ಆದ್ರೆ, ಪ್ರಧಾನಿ ಮೋದಿ ಅವರು ಯಾವಾಗಲೂ ಅನಗತ್ಯ ವಿಚಾರಗಳ ಕುರಿತಾಗಿ ದೇಶದ ಜನರ ಗಮನ ಸೆಳೆಯುತ್ತಾರೆ ಎಂದು ಕೆ. ಸಿ. ವೇಣುಗೋಪಾಲ್ ಆಕ್ರೋಶ ವ್ಯಕ್ತಪಡಿಸಿದರು.

ಸಮಾನ ನಾಗರಿಕ ಸಂಹಿತೆ ಅತ್ಯಗತ್ಯ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಡಿಎಂಕೆ ಕೂಡಾ ಆಕ್ಷೇಪ ವ್ಯಕ್ತಪಡಿಸಿದೆ. ಏಕರೂಪ ನಾಗರಿಕ ಸಂಹಿತೆಯನ್ನು ಮೊದಲು ಹಿಂದೂ ಧರ್ಮೀಯರಿಗೆ ಅನ್ವಯಿಸಿ ಎಂದು ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್ ಸವಾಲೆಸೆದಿದ್ದಾರೆ. ಹಿಂದೂ ಧರ್ಮೀಯರಾದ ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ದೇವಸ್ಥಾನಗಳಲ್ಲಿ ಪೂಜೆ ಮಾಡಲು ಬಿಡೋದಿಲ್ಲ ಎಂದು ಹೇಳಿರುವ ಇಳಂಗೋವನ್, ನಮ್ಮ ದೇಶದ ಸಂವಿಧಾನವು ಎಲ್ಲ ಧರ್ಮಗಳನ್ನೂ ರಕ್ಷಣೆ ಮಾಡುತ್ತದೆ. ಇದೇ ಕಾರಣಕ್ಕಾಗಿ ನಮಗೆ ಯುಸಿಸಿ ಬೇಡ ಎಂದು ಅವರು ಹೇಳಿದ್ದಾರೆ.

ಇದೇ ವಿಚಾರವಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಹಾಗೂ ಕಾಂಗ್ರೆಸ್ ನಾಯಕ ಆರೀಫ್ ಮಸೂದ್ ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸುವಾಗ ಡಾ. ಬಿ. ಆರ್. ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದ ಆಧಾರದ ಮೇಲೆ ಪ್ರಮಾಣ ವಚನ ಸ್ವೀಕಾರ ಮಾಡಿ ಅಧಿಕಾರಕ್ಕೆ ಬಂದರು. ಅದನ್ನು ಅವರು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದಿದ್ದಾರೆ. ದೇಶದ ಪ್ರತಿಯೊಂದು ವರ್ಗವೂ ಸಂವಿಧಾನದ ಮೇಲೆ ನಂಬಿಕೆ ಇಟ್ಟಿದೆ. ನಾವು ಕಾನೂನು ಬದಲಾಗಲು ಬಿಡೋದಿಲ್ಲ ಎಂದಿದ್ದಾರೆ.

ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ವಿರೋಧ ಪಕ್ಷಗಳು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ತ್ರಿವಳಿ ತಲಾಖ್ ನಿಷೇಧವನ್ನು ವಿರೋಧಿಸಿದವು ಎಂದು ಆಪಾದಿಸಿದ್ದರು. ಮುಸ್ಲಿಂ ಮಹಿಳೆಯರಿಗೆ ಆಗುತ್ತಿದ್ದ ಅನ್ಯಾಯವನ್ನು ಸರಿಪಡಿಸಲು ನಾವು ತ್ರಿವಳಿ ತಲಾಖ್ ನಿಷೇಧ ಮಾಡಿದೆವು. ಮುಸ್ಲಿಂ ದೇಶಗಳಾದ ಪಾಕಿಸ್ತಾನ, ಇಂಡೋನೇಷ್ಯಾ ಹಾಗೂ ಬಾಂಗ್ಲಾ ದೇಶಗಳಲ್ಲೇ ಈ ಕಾನೂನು ಇಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

ಇದೇ ವೇಳೆ ಏಕರೂಪ ನಾಗರಿಕ ಸಂಹಿತೆಯ ಅಗತ್ಯತೆಯನ್ನು ಪ್ರತಿಪಾದಿಸಿದ ಪ್ರಧಾನಿ ಮೋದಿ, ಈ ದೇಶ ಎರಡು ಕಾನೂನುಗಳನ್ನು ಹೊಂದಿರಲು ಸಾಧ್ಯವಿಲ್ಲ. ಹೀಗಾಗಿ, ಏಕರೂಪ ನಾಗರಿಕ ಸಂಹಿತೆಯು ಈ ದೇಶದ ಸಂವಿಧಾನದ ಭಾಗವಾಗಿದೆ ಎಂದು ಪ್ರಧಾನಿ ಹೇಳಿದರು.

ಸುಪ್ರೀಂ ಕೋರ್ಟ್‌ ಕೂಡಾ ಏಕರೂಪ ನಾಗರಿಕ ಸಂಹಿತೆ ಜಾರಿಯ ಮಹತ್ವವನ್ನು ಪ್ರತಿಪಾದಿಸುತ್ತದೆ. ಆದರೆ, ವಿರೋಧ ಪಕ್ಷಗಳ ನಾಯಕರು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ