ಹುಬ್ಬಳ್ಳಿ : ಇದೊಂದು ಬಾರಿ ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಸ ನೀಡಿದ್ದರೆ ನಂತರದ ದಿನಗಳಲ್ಲಿ ರಾಜಕೀಯ ಸನ್ಯಾಸಕ್ಕೂ ಸಿದ್ಧವಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಗೊಂಡ ನಂತರ ಹುಬ್ಬಳ್ಳಿಗೆ ಆಗಮಿಸಿದ ಜಗದೀಶ ಶೆಟ್ಟರ್, ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ನಾನು ಕಾಂಗ್ರೆಸ್ಗೆ ಸೇರ್ಪಡೆಗೊಂಡ ತಕ್ಷಣ ಈ ಮೊದಲು ಸ್ಥಾನಮಾನ ನೀಡಿದ್ದ ಪಕ್ಷವನ್ನು ಬೈಯಬೇಕೆಂದೇನೂ ಇಲ್ಲ ಎಂದು ಹೇಳುವ ಮೂಲಕ ಬಿಜೆಪಿ ಬಗ್ಗೆ ಮೃಧುಧೋರಣೆ ವ್ಯಕ್ತಪಡಿಸಿದರು. ಬಿಜೆಪಿಯಲ್ಲಿ ಇರುವ ಕೆಲವರು ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಬಹಿರಂಗಗೊಳಿಸುತ್ತೇನೆ ಎಂದರು.
ನಾನು ಅಧಿಕಾರಕ್ಕಾಗಿ ಪಕ್ಷ ಬದಲಾವಣೆ ಮಾಡಿಲ್ಲ. ಅಧಿಕಾರ ಬೇಕಾಗಿದ್ದರೆ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಮಂತ್ರಿ ಸ್ಥಾನ ಬೇಡವೆಂದು ನಾನು ಹೇಳುತ್ತಿರಲಿಲ್ಲ. ಅನೇಕರು 9, 10 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದಿದ್ದಾರೆ. 80 ವರ್ಷ ಆದರೂ ಸಕ್ರಿಯ ರಾಜಕಾರಣದಲ್ಲಿ ಇದ್ದಾರೆ ಎಂದು ಹೇಳಿದರು.
ನನ್ನನ್ನು ಹಾಗೂ ನನ್ನ ಬೆಂಬಲಿಗರನ್ನು ಗೌರವದಿಂದ ಕಾಣುವಂತೆ ಕಾಂಗ್ರೆಸ್ ಮುಖಂಡರಿಗೆ ಹೇಳಿದ್ದೇನೆ. ಇದನ್ನು ಹೊರತುಪಡಿಸಿ ಇನ್ನಾವುದೇ ಷರತ್ತು ಇಲ್ಲದೇ ಆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ ಎಂದರು.
ಏ. 19ರಂದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ತಿಳಿಸಿದರು.