Mysore
19
overcast clouds
Light
Dark

ಬ್ಲಾಕ್‍ಮೇಲ್ ಮತ್ತು ಬೆದರಿಕೆಗಳಿಗೆ ನಾನು ಜಗ್ಗುವುದಿಲ್ಲ: ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು : ಬಾಕಿ ಬಿಲ್‍ಗಳ ಬಿಡುಗಡೆ ವಿಚಾರದಲ್ಲಿ ಕಂಡುಬರುತ್ತಿರುವ ಬ್ಲಾಕ್‍ಮೇಲ್ ಮತ್ತು ಬೆದರಿಕೆಗಳಿಗೆ ನಾನು ಜಗ್ಗುವುದಿಲ್ಲ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕೆಲಸ ಮಾಡಿದ್ದರೆ ಹಣ ಬಿಡುಗಡೆಯಾಗುತ್ತದೆ. ಇದರಲ್ಲಿ ನಾನು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಗುತ್ತಿಗೆದಾರರ ಸಂಘದವರು ಹೇಳಿದ್ದಕ್ಕೆಲ್ಲಾ ನಾನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಅವರು ಹೇಳಿದಂತೆ ಪ್ರಮಾಣ ಮಾಡಬೇಕಿಲ್ಲ, ಉತ್ತರಿಸುವ ಅಗತ್ಯವಿಲ್ಲ, ಎಲ್ಲವೂ ಕಾನೂನಿನ ಪ್ರಕಾರ ನಡೆಯುತ್ತದೆ. ಕೆಲಸ ಮಾಡಿದ್ದರೆ ಅಂತವರಿಗೆ ಹಣ ಸಿಗುತ್ತದೆ.‌ ಹಿಂದೆ ಬಿಬಿಎಂಪಿಯಲ್ಲೇ ಏನೆಲ್ಲಾ ಆಗಿದೆ ಎಂದು ಗೊತ್ತಿದೆ. ಒಂದೇ ದಿನದಲ್ಲಿ ಅರ್ಜಿ ಹಾಕಿ ಮಾರನೆಯ ದಿನ ಕಾರ್ಯಾದೇಶ ಪಡೆದುಕೊಂಡು 20 ದಿನದಲ್ಲಿ ಕೆಲಸ ಮುಗಿಸಿ ಹಣ ಬಿಡುಗಡೆ ಮಾಡಿದ್ದಾರೆ. ಒಂದು ತಿಂಗಳಿನಲ್ಲಿ ಸಾವಿರ ಕೋಟಿ ರೂ.ಗಳ ಕೆಲಸವಾಗಿದೆ. ಇದು ಸಾಧ್ಯವೇ ಎಂದು ಪ್ರಶ್ನಿಸಿದರು.

ನನಗೂ ರಾಜಕಾರಣ ಗೊತ್ತಿದೆ. ಗುತ್ತಿಗೆದಾರರ ಪರಿಚಯವೂ ಇದೆ. ಈಗ ಆರೋಪ ಮಾಡುತ್ತಿರುವವರ ಹಿಂದೆ ಯಾರಿದ್ದಾರೆ ಎಂಬುದೂ ಗೊತ್ತಿದೆ. ಬ್ಲಾಕ್‍ಮೇಲ್ ಮಾಡುವುದು, ಬೆದರಿಸುವುದು, ರಾಜ್ಯಪಾಲರು, ರಾಷ್ಟ್ರಪತಿ, ರಾಜಕೀಯ ಪಕ್ಷಗಳ ನಾಯಕರ ಬಳಿ ಹೋಗುವುದು ಎಲ್ಲವೂ ನಮಗೆ ಗೊತ್ತಿದೆ. ನಾವು ವಿರೋಧಪಕ್ಷದಲ್ಲಿದ್ದರೂ ನಮ್ಮ ಬಳಿಯೂ ಗುತ್ತಿಗೆದಾರರು ಬರುತ್ತಿದ್ದರು. ವಿರೋಧಪಕ್ಷಗಳು ಇಂತಹ ವಿಚಾರಗಳಿಗಾಗಿಯೇ ಕಾಯುವುದು ಸಹಜ. ನಾನು ಯಾವುದೇ ಗುತ್ತಿಗೆದಾರರ ಜೊತೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ನೈಜವಾಗಿ ಕೆಲಸವಾಗಿದ್ದರೆ ಅದನ್ನು ದೃಢೀಕರಿಸುವಂತೆ ಅಕಾರಿಗಳಿಗೆ ಸೂಚಿಸಿದ್ದೇವೆ. ಅವರು ಕಾನೂನಿನ ಪ್ರಕಾರ ಪರಿಶೀಲನೆ ಮಾಡುತ್ತಾರೆ. ಗುತ್ತಿಗೆದಾರರ ವಿಷಯದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಯಾವುದೇ ಒತ್ತಡ ಬಂದರೂ ನಾನು ತಡೆದುಕೊಳ್ಳಲು ಸಿದ್ಧನಿದ್ದೇನೆ. ಬೇರೆಯವರನ್ನು ಹೆದರಿಸಿದಂತೆ ನನ್ನನ್ನು ಹೆದರಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಈ ಹಿಂದೆ ನಾವು ವಿರೋಧಪಕ್ಷದಲ್ಲಿದ್ದಾಗ ಬಿಜೆಪಿ ಸರ್ಕಾರ ಕಮಿಷನ್ ಪಡೆದಿರುವ ಬಗ್ಗೆ ಆರೋಪ ಮಾಡಿದ್ದರು. ಆಗ ಗುತ್ತಿಗೆದಾರ ಸಂಘದವರು ಪ್ರಧಾನಿಯವರಿಗೆ ಪತ್ರ ಬರೆದು ಶೇ.40 ರಷ್ಟು ಕಮಿಷನ್ ಪಡೆಯುತ್ತಿರುವುದರ ಬಗ್ಗೆ ದೂರಿದ್ದರು. ಅಕಾರಿಗಳು ಹೇಳಿದ್ದರು. ಅದರ ಬಗ್ಗೆ ತನಿಖೆಯಾಗುತ್ತಿದೆ.

ಹಿಂದೆ ಬಿಜೆಪಿಯ ಅಶ್ವತ್ಥನಾರಾಯಣ ಸೇರಿದಂತೆ ವಿವಿಧ ಶಾಸಕರು ತನಿಖೆಗೆ ಒತ್ತಾಯಿಸಿದ್ದರು. ಆಗಿನ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರೇ ತನಿಖೆ ಮಾಡಿಸುವ ಭರವಸೆ ನೀಡಿದ್ದರು. ಲೋಕಾಯುಕ್ತರು ವರದಿ ನೀಡಿ ಹಣವಿಲ್ಲದಿದ್ದರೂ 134 ಕೋಟಿ ರೂ. ಬಿಲ್ ಪಾವತಿ ಮಾಡಿದ್ದಾರೆ ಎಂದು ತಿಳಿಸಿದ್ದರು. ಅದರ ಮೇಲೆ ಕೆಲ ಅಕಾರಿಗಳನ್ನು ಅಮಾನತುಪಡಿಸಲಾಗಿತ್ತು. ಇನ್ನು ಮುಂದೆಯೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದ ಹಗರಣದ ಬಗ್ಗೆ ತನಿಖೆ ನಡೆಯುತ್ತಿದೆ. ಗುತ್ತಿಗೆದಾರರು ತಮ್ಮ ಬಳಿಯೂ ಬಂದಿದ್ದರು. ಯಾರು ಕೆಲಸ ಮಾಡಿದ್ದಾರೋ ಅವರಿಗೆ ಬಿಲ್ ಸಿಗುತ್ತದೆ, ಕಾಯಬೇಕು. ಈ ಹಿಂದೆ ಎರಡು-ಮೂರು ವರ್ಷ ಕಾದಿರಲಿಲ್ಲವೇ ಎಂದರು.

ಜಲಸಂಪನ್ಮೂಲ ಇಲಾಖೆಯಲ್ಲಿ 25 ಸಾವಿರ ಕೋಟಿ ರೂ.ಗಳ ಬಿಲ್ ಪಾವತಿಸಬೇಕು. 600 ಕೋಟಿ ರೂ. ಹಣ ಇದೆ. ಬಿಬಿಎಂಪಿಯಲ್ಲಿ 450 ಕೋಟಿ ರೂ.ಗಳಷ್ಟು ಹಣ ಇದೆ. ಕೆಲಸ ಮಾಡಿದ ಎಲ್ಲರಿಗೂ ಬಿಲ್ ಪಾವತಿಸಲು ಹಣ ಇಲ್ಲ ಎಂದು ಹೇಳಿದರು.

ನಾಳೆ ಮುಖ್ಯಮಂತ್ರಿಯವರು ಬೆಂಗಳೂರಿನ ಸಚಿವರ ಸಭೆ ನಡೆಸಲಿದ್ದಾರೆ. ಅದಕ್ಕೆ ಪೂರ್ವಭಾವಿಯಾಗಿ ಇಂದು ಪ್ರಮುಖ ಸಚಿವರು ಶಾಸಕರ ಜೊತೆ ಉಪಾಹಾರ ಕೂಟವನ್ನು ನಡೆಸಲಾಗಿದೆ. ಇಲ್ಲಿ ಕ್ಷೇತ್ರಗಳ ಸಮಸ್ಯೆಗಳು, ಹಿಂದಿನ ಸರ್ಕಾರದ ತಾರತಮ್ಯಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಯಾವುದನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳಬೇಕು, ಯಾವುದನ್ನು ಬಿಡಬೇಕು ಎಂಬುದನ್ನು ಹಣಕಾಸು ಲಭ್ಯತೆ ಆಧರಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ