ಗುವಾಹಟಿ: ‘ಚಹಾಕೂಟ, ಊಟಕ್ಕಾಗಿ ಹಿಮಂತ ಬಿಸ್ವ ಶರ್ಮ ಅವರನ್ನು ನವದೆಹಲಿಯ ನನ್ನ ಮನೆಗೆ ಆಹ್ವಾನಿಸುತ್ತೇನೆ. ಆದರೆ, ಬೆದರಿಕೆ ಒಡ್ಡುವುದು ಮುಖ್ಯಮಂತ್ರಿ ಸ್ಥಾನದಲ್ಲಿರುವ ಶರ್ಮ ಅವರಿಗೆ ಶೋಭೆ ತರುವುದಿಲ್ಲ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾನುವಾರ ಹೇಳಿದರು.
ಅಸ್ಸಾಂ ಜನರು ಒಳ್ಳೆಯವರು. ಇಲ್ಲಿನ ಜನರು ಅತಿಥಿಗಳನ್ನು ಸ್ವಾಗತಿಸುತ್ತಾರೆ. ಹಿಮಂತ ಬಿಸ್ವ ಶರ್ಮ ಅವರು ಇಲ್ಲಿನ ಜನರನ್ನು ನೋಡಿ ಕಲಿಯಬೇಕು’ ಎಂದು ಇಲ್ಲಿನ ಲೋಕಪ್ರಿಯ ಗೋಪಿನಾಥ ಬೋರ್ದೊಲೋಯಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಕೇಜ್ರಿವಾಲ್ ಹೇಳಿದರು.
ದೆಹಲಿ ವಿಧಾನಸಭೆಯಲ್ಲಿ ಮಾತನಾಡಿದ್ದ ಕೇಜ್ರಿವಾಲ್, ‘ಶರ್ಮ ವಿರುದ್ಧ ಹಲವಾರು ಪ್ರಕರಣಗಳಿವೆ’ ಎಂದು ಹೇಳಿದ್ದರು ಎನ್ನಲಾಗಿದೆ.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಶರ್ಮ, ‘ವಿಧಾನಸಭೆ ಹೊರಗಡೆ ಮಾತನಾಡಿ, ನನ್ನ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದರೆ ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ’ ಎಂದು ಶುಕ್ರವಾರ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಅವರಿಂದ ಇಂಥ ಹೇಳಿಕೆ ಹೊರಬಿದ್ದಿದೆ.‘ದೇಶದ ಯಾವುದಾದರೂ ಠಾಣೆಯಲ್ಲಿ ನನ್ನ ವಿರುದ್ಧ ಎಫ್‌ಐಆರ್ ದಾಖಲಾಗಿದೆಯಾ’ ಎಂದು ಶರ್ಮ ಪ್ರಶ್ನಿಸಿದ್ದರು.
‘ನನ್ನ ವಿರುದ್ಧ ಆರೋಪ ಮಾಡಿದ ಕೇಜ್ರಿವಾಲ್ ವಿರುದ್ಧ ಮೊಕದ್ದಮೆ ಹೂಡಲು ಬಯಸಿದ್ದೆ. ಆದರೆ, ಆತ ಒಬ್ಬ ಹೇಡಿ. ವಿಧಾನಸಭೆಯಲ್ಲಿ ಮಾತನಾಡಿ ನನ್ನ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ’ ಎಂದು ಕೇಜ್ರಿವಾಲ್ ವಿರುದ್ಧ ಹರಿಹಾಯ್ದಿದ್ದರು.
‘ಕೇಜ್ರಿವಾಲ್ ಅವರು ಏಪ್ರಿಲ್ 2ರಂದು ಅಸ್ಸಾಂಗೆ ಬಂದು, ನನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಲಿ. ಸಿಸೋಡಿಯಾ ವಿರುದ್ಧ ಹೂಡಿರುವಂತೆ, ಮರುದಿನವೇ ಕೇಜ್ರಿವಾಲ್ ವಿರುದ್ಧವೂ ಮಾನನಷ್ಟ ಮೊಕದ್ದಮೆ ದಾಖಲಿಸುವೆ’ ಎಂದೂ ಹೇಳಿದ್ದರು.





