Mysore
18
overcast clouds

Social Media

ಶನಿವಾರ, 09 ನವೆಂಬರ್ 2024
Light
Dark

ಎಚ್‌ಡಿಕೆ ಆರೋಪಕ್ಕೆ ಸದನದಲ್ಲಿ ಉತ್ತರ ಕೊಡುತ್ತೇನೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿಯವರು ಹತಾಶೆ, ದ್ವೇಷದಿಂದ ಹೀಗೆಲ್ಲಾ ಮಾತನಾಡುತ್ತಿದ್ದಾರೆ. ಹೊಸ ಸರ್ಕಾರ ರಚನೆಯಾದ ಮೇಲೆ ವರ್ಗಾವಣೆಯಾಗುವುದು ಸಾಮಾನ್ಯ. ಅದರಲ್ಲಿ ದಂಧೆ, ಲಂಚ ನಡೆದಿದೆ ಎನ್ನುವುದು ಸುಳ್ಳು ಆರೋಪ ಎಂದು ಸಿಎಂ ಸಿದ್ದರಾಮಯ್ಯ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಗಳು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ವರ್ಗಾವಣೆಯಾಗಿರಲಿಲ್ಲವೇ, ಆಗ ಅವರು ಲಂಚ ತೆಗೆದುಕೊಂಡಿದ್ದರೇ, ಟ್ರಾನ್ಸ್ ಫರ್ ಆದಾಗ ದುಡ್ಡು ತಗೊಂಡಿದ್ದಾರೆ, ಲಂಚ ತೆಗೆದುಕೊಂಡಿದ್ದಾರೆ ಎನ್ನುವುದು ಕೇವಲ ಊಹೆಯಷ್ಟೇ ಎಂದರು.

ಆಡಳಿತಾತ್ಮಕ ದೃಷ್ಟಿಯಿಂದ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ನಡೆಯುತ್ತದೆ. ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಎಲೆಕ್ಷನ್ ಎಂದು ವರ್ಗಾವಣೆಗಳು ಆಗಿರಲಿಲ್ಲ, ಈಗ ನಡೆಯುತ್ತಿರುವ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಸಾಮಾನ್ಯ ಪ್ರಕ್ರಿಯೆ ಎಂದರು.

ಕುಮಾರಸ್ವಾಮಿ ಹಿಟ್ ಅಂಡ್ ರನ್ ಕೇಸು: ಕುಮಾರಸ್ವಾಮಿಯವರು ಯಾವಾಗಲೂ ಹಿಟ್ ಅಂಡ್ ರನ್ ಕೇಸು, ಅವರು ಇದುವರೆಗೆ ಮಾಡಿರುವ ಆರೋಪಗಳನ್ನು ತಾತ್ವಿಕವಾಗಿ ಕೊನೆಯವರೆಗೆ ತೆಗೆದುಕೊಂಡು ಹೋಗಿದ್ದಾರೆಯೇ, ಸರಿಯಾದ ಸಮಯಕ್ಕೆ ದಾಖಲೆ ಬಿಡುಗಡೆ ಮಾಡಲಿ ನೋಡೋಣ, ನಾವು ಆಗ ಉತ್ತರ ಕೊಡುತ್ತೇವೆ ಎಂದರು.

ಅವರ ಕುಟುಂಬದವರೂ ರಾಜಕೀಯದಲ್ಲಿ ಇದ್ದಾರೆ: ಯತೀಂದ್ರ ಮಾಜಿ ಶಾಸಕರಾಗಿದ್ದವರು ನಮ್ಮ ಮನೆಯಲ್ಲಿ ಇರುತ್ತಾರೆ, ಹಾಗಾದರೆ ಕುಮಾರಸ್ವಾಮಿಯವರ ಮಗ, ಹೆಂಡತಿ, ಅವರ ಅಣ್ಣ ಎಲ್ಲರೂ ರಾಜಕೀಯದಲ್ಲಿ ಇಲ್ಲವೇ, ಅವರನ್ನು ಏನೂಂತ ಕರೆಯೋದು, ಕುಮಾರಸ್ವಾಮಿಯವರ ಆರೋಪಕ್ಕೆ ವಿಧಾನಸಭೆಯಲ್ಲಿ ಉತ್ತರ ಕೊಡುತ್ತೇನೆ ಎಂದು ತಿರುಗೇಟು ನೀಡಿದರು.

ಬಸ್ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನ ಕುರಿತು ವರದಿ ಕೇಳುತ್ತೇನೆ: ರಾಜಕೀಯ ದ್ವೇಷದಿಂದ ವರ್ಗಾವಣೆ ಮಾಡಿದ್ದಾರೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ವಿರುದ್ಧ ಆರೋಪ ಮಾಡಿ ಕೆಎಎಸ್​ಆರ್​​ಟಿಸಿ ಬಸ್ ಚಾಲಕ ಜಗದೀಶ್ ಎಂಬವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಗೆ ಪ್ರತಿಕ್ರಿಯಿಸಿದ ಸಿಎಂ, ಈ ವಿಚಾರದ ಬಗ್ಗೆ ವಿವರ ಗೊತ್ತಿಲ್ಲ, ತಿಳಿದುಕೊಂಡು ಹೇಳುತ್ತೇನೆ ಎಂದರು.

ಜಗದೀಶ್ ಅವರ ಪತ್ನಿ ಪಂಚಾಯತ್ ಸದಸ್ಯೆ, ಇದರಲ್ಲಿ ರಾಜಕೀಯ ಇರಬಹುದು ಎಂದು ನನಗೆ ಅನಿಸುತ್ತದೆ, ಅವರನ್ನು ವರ್ಗಾವಣೆ ಮಾಡಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದು, ವರ್ಗಾವಣೆಗೆ ಆತ್ಮಹತ್ಯೆ ಯತ್ನಕ್ಕೆ ಸಚಿವ ಚಲುವರಾಯಸ್ವಾಮಿ ಕಾರಣ ಎಂದು ಕುಮಾರಸ್ವಾಮಿಯವರು ಆರೋಪ ಮಾಡುತ್ತಿದ್ದಾರೆ. ಅವರ ಆರೋಪದಲ್ಲಿ ಹುರುಳಿದೆ ಎಂದು ನನಗನಿಸುವುದಿಲ್ಲ. ಈ ಬಗ್ಗೆ ವರದಿ ತರಿಸಿಕೊಳ್ಳುತ್ತೇನೆ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ