ಬಾಗಲಕೋಟೆ : ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವು ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಒಬ್ಬರ ಮೇಲೊಬ್ಬರು ಕೆಸರು ಎರಚಾಟ ಮಾಡುತ್ತಿದ್ದಾರೆ. ವೆಸ್ಟೆಂಡ್ ಹೋಟೆಲ್ ನಲ್ಲಿ ಕಾಲ ಕಳೆದು, ಅಧಿಕಾರ ಕಳಕೊಂಡ ಎಂಬ ಸಿದ್ದರಾಮಯ್ಯ ಟೀಕೆಗೆ ಎಚ್‌ಡಿಕೆ ಖಾರವಾಗಿ ಪ್ರತಿಕ್ರಿಯೆ ನೀಡುವ ಮೂಲಕವಾಗಿ ತಿರುಗೇಟು ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಮಾಜಿ ಸಿಎಂ ಎಚ್.ಡಿಕೆ ಮಾತನಾಡಿ, ಈ ಬಗ್ಗೆ ಸಾವಿರಬಾರಿ ಹೇಳಿದ್ದೇನೆ, ಮೊದಲನೇ ಅಪರಾಧ ಸಿದ್ದರಾಮಯ್ಯ ಅವರದ್ದೇ ಆಗಿದೆ. ಜಾರ್ಜ್ ಹೆಸರಲ್ಲಿ ಮನೆ ತಗೊಂಡು ಅದರಲ್ಲಿ ಮುಂದುವರೆದರು. ನನಗೆ ಸರ್ಕಾರಿ ಕ್ವಾಟರ್ಸ್ ಮನೆ ಬಿಟ್ಟುಕೊಡಲಿಲ್ಲ. ಈಗ ಕೇಂದ್ರ ನಾಯಕರೆಲ್ಲ ಬರ್ತಿದ್ದಾರಲ್ಲ, ಅವರು ಎಲ್ಲಿ ವಾಸ್ತವ್ಯ ಮಾಡ್ತಾರೆ ? ವೆಸ್ಟೆಂಡ್ ಹೋಟೆಲ್ನಲ್ಲಿ ನಾನು ಪರ್ಮನೆಂಟ್ ಆಗಿ ಇದ್ದವನಾ ? ಎಂದು ಪ್ರಶ್ನೆ ಮಾಡಿದ್ದಾರೆ.
ನಾನು ಹೋಟೆಲ್ನಲ್ಲಿ ಇದ್ದುಕೊಂಡು ಬೆಳಗ್ಗೆ 9 ರಿಂದ ರಾತ್ರಿ 1 ಗಂಟೆವರೆಗೂ ಕೆಲಸ ಮಾಡುತಿದ್ದೆ. ಸಿದ್ದರಾಮಯ್ಯ ಯಾವ ರೀತಿ ಕೆಲಸ ಮಾಡುತ್ತಿದ್ದರು ಎಂಬುದು ಎಲ್ಲಿರಿಗೂ ಗೊತ್ತಿರುವ ವಿಚಾರವಾಗಿದೆ. ಮಧ್ಯಾಹ್ನ ೧ ಗಂಟೆಗೆ ವಿಧಾನಸೌಧ ಖಾಲಿ ಮಾಡಿಕೊಂಡ ಹೋದ್ರೆ ಎಲ್ಲಿಗೆ ಹೋಗ್ತಿದ್ರು, ಆರು ಗಂಟೆ ಮೇಲೆ ಯಾರಿಗೆ ಸಿಗುತ್ತಿದ್ದರು ಎಂದು ವ್ಯಂಗ್ಯವಾಡಿದ್ದಾರೆ.
ನಾನು ರಾತ್ರಿ ೧೨ ಗಂಟೆವೆರೆಗೆ ಕೆಲಸ ಮಾಡ್ತಿದ್ದೆ. ಕಾಂಗ್ರೆಸ್ನ 78 ಶಾಸಕರಿಗೆ ನನ್ನ 14 ತಿಂಗಳ ಆಡಳಿತ ಅವಧಿಯಲ್ಲಿ 19 ಸಾವಿರ ಕೋಟಿ ರೂ. ಅನುದಾನ ಕೊಟ್ಟಿದ್ದೀನಿ. ಇವತ್ತು ಬಿಜೆಪಿ ಸರ್ಕಾರದಲ್ಲಿ ಕೆಲಸ ನಡೆದಿರೋದು, ನಾನು ಸಿಎಂ ಆಗಿದ್ದಾಗ ಕೊಟ್ಟ ದುಡ್ಡಿನಿಂದ. ಬಾದಾಮಿಗೆ ಅಭಿವೃದ್ದಿ ಕೆಲಸ ಆಗಿದ್ದು, ನಾನು ಕೊಟ್ಟ ದುಡ್ಡಿನಲ್ಲಿಯೇ ಎಂದು ತಮ್ಮ ಆಢಳಿತಾವಧಿಯ ಕುರಿತಾಗಿ ಮಾತನಾಡಿದ್ದಾರೆ.
ಸಿದ್ದರಾಮಯ್ಯಗೆ ಬಿಜೆಪಿಯವರಿಂದ ದುಡ್ಡು ತೊಗೊಳೊದಕ್ಕೆ ಆಯ್ತಾ? ಜನರ ಬಳಿಗೆ ಹೋಗಿ ಕೆಲಸ ಹೆಂಗೆ ಮಾಡಬೇಕು ಎಂಬುದನ್ನ ಸಿದ್ದರಾಮಯ್ಯ ಅವರಿಂದ ಕಲಿಯಬೇಕಿಲ್ಲ. ಬಾದಾಮಿಗೆ ತಂದಿದ್ದು ನಾಲ್ಕು ಸಾವಿರ ಕೋಟಿ ಎಲ್ಲಿದೆ ದುಡ್ಡು? ಮಳೆಗಾಲದಲ್ಲಿ ಜಲಾವೃತವಾಗುವ ಯಾವುದಾದ್ರೂ ಒಂದು ಹಳ್ಳಿಗೆ ಪುನರ್ ವಸತಿ ಕಲ್ಪಿಸಿದ್ದಾರಾ? 5 ವರ್ಷದಲ್ಲಿ ಬಾದಾಮಿಗೆ ಮೂಲಭೂತ ಸೌಲಭ್ಯವನ್ನಾದರೂ ಕಲ್ಪಿಸಿದ್ದಾರಾ ಎಂದು ಎಚ್.ಡಿಕೆ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.





