Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ನಿಮ್ಮಷ್ಟು ಪ್ರಬುದ್ಧತೆ ನನಗೆ ಬೇಕಿಲ್ಲ ಸರ್‌! 59 ಸಾವಿರ ಕೋಟಿ ರೂ. ಎಲ್ಲಿಂದ ತರ್ತಿರಿ ಹೇಳಿ: ಪ್ರತಾಪ್‌ ಸಿಂಹ

ಮೈಸೂರು : ಸಿದ್ದರಾಮಯ್ಯ ಅವರು ನನ್ನನ್ನು ಎಳಸು ಎಂದರು ಬೇಜಾರಿಲ್ಲ. ನಾನು ಕೇಳಿದ ಪ್ರಶ್ನೆಗಳಿಗೇಕೆ ಉತ್ತರ ನೀಡುತ್ತಿಲ್ಲ. ನೀವು ಬುದ್ದಿವಂತರಿದ್ದೀರಿ, ರಾಜ್ಯದ ಹಣಕಾಸು ವ್ಯವಸ್ಥೆ ತಿಳಿದಿರುವ ನೀವು ಹೇಗೆ ಗ್ಯಾರಂಟಿ ಘೋಷಣೆ ಮಾಡಿದ್ರಿ? 59 ಸಾವಿರ ಕೋಟಿ ರೂ. ಅನ್ನು ಎಲ್ಲಿಂದ ತರುತ್ತೀರಿ ಹೇಳಿ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ಪ್ರಶ್ನಿಸಿದ್ದಾರೆ.

ಪ್ರತಾಪ್‌ ಸಿಂಹ ಎಳಸು, ರಾಜಕೀಯ ಪ್ರಬುದ್ಧತೆ ಇಲ್ಲ ಎಂದ ಸಿದ್ದರಾಮಯ್ಯ ಅವರ ಹೇಳಿಕೆಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ನನ್ನನ್ನು ಚೈಲ್ಡ್ ಅಂತಾನೆ ಕರೆಯಿರಿ ಬೇಜಾರು ಇಲ್ಲ. ಆದರೆ, ರಾಜ್ಯದಲ್ಲಿ ಸಂಪನ್ಮೂಲ ಕ್ರೋಡಿಕರಣ ಮಾಡುವುದು ಹೇಗೆ ತಿಳಿಸಿ. ಹಿರಿಯ ರಾಜಕಾರಣಿ ಆಗಿರುವ ನೀವು ಜಿ ಪರಮೇಶ್ವರ್ ಅವರನ್ನು ಮುಗಿಸಿ ಸಿಎಂ ಆಗಿದ್ರಲ್ಲ ಆ ರೀತಿಯ ಪ್ರಬುದ್ಧತೆ ನನಗೆ ಬೇಕಿಲ್ಲ ಸರ್ ಎಂದು ಟಾಂಗ್‌ ನೀಡಿದ್ದಾರೆ.

ಇನ್ನು, ರಾಜಕೀಯದಲ್ಲಿ ನಿಮ್ಮನ್ನು ಮುಂದೆ ಬರಲು ಸಹಕರಿಸಿದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಬಗ್ಗೆ ಅಗೌರವವಾಗಿ ಮಾತನಾಡುವುದು ನಿಮ್ಮ ಪ್ರಬುದ್ಧತೆ ಎನ್ನುವುದಾದರೆ ಅದು ನನಗೆ ಬೇಡ ಸರ್‌. ರಾಜ್ಯದಲ್ಲಿ ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಮುಖ ‌ಪಾತ್ರ ವಹಿಸಿದ್ದರು. ಆದರೆ, ಅವರ ವಿರುದ್ಧವೇ ಎಂಬಿ ಪಾಟೀಲರನ್ನು ಚೂ ಬಿಟ್ಟಿದ್ದೀರಿ. ಇದನ್ನೆಲ್ಲಾ ಮೆಚುರಿಟಿ ಎನ್ನುವುದಾದರೆ ಇದ್ಯಾವೂದು ನನಗೆ ಬೇಡ ಸರ ಎಂದು ಕಿಡಿಕಾರಿದ್ದಾರೆ.

ಇನ್ನು, ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಸರಣಿ ಹತ್ಯೆ, ಹಲ್ಲೆಗಳಾಗಿವೆ. ಕಲಬುರಗಿಯಲ್ಲಿ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಹತ್ಯೆ ಆಯ್ತು. ಡಿಸಿಪಿಯಾಗಿದ್ದ ಗಣಪತಿ ಭಟ್‌ ಆತ್ಮಹತ್ಯೆ ಮಾಡಿಕೊಂಡರು. ಮೈಸೂರಿನಲ್ಲಿ ಅಧಿಕಾರಿ ರಶ್ಮಿ ಮಹೇಶ್ ಮೇಲೆ ದಾಳಿಯಾಯ್ತು. ಶಿಖಾ ಹಲ್ಲೆ ಸೇರಿ ಹಲವೆಡೆ ಗಲಾಟೆಗಳಾಗಿದ್ದವು. ಹೀಗಾಗಿ ಈ ಬಾರಿಯೂ ನಾವು ಕಾನೂನು ವ್ಯವಸ್ಥೆಯನ್ನು ಕಾಣಲು ಸಾಧ್ಯವಿಲ್ಲ. ಕರ್ನಾಟಕದ ಜನ ಮುಂದೆ ಇನ್ನಷ್ಟು ನೋಡುವುದು ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಡಿಕೆ ಶಿವಕುಮಾರ್‌ ಮುಖ್ಯಮಂತ್ರಿ ಆಗಬೇಕಿತ್ತು!

10 ಕೆಜಿ ಅಕ್ಕಿ ಕೊಡ್ತೀವಿ ಎಂದು ಘೋಷಣೆ ಮಾಡುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಏನಾದರೂ ಕೇಳಿದ್ರಾ ಎಂದು ಪ್ರತಾಪ್‌ ಸಿಂಹ ಪ್ರಶ್ನಿಸಿದರು. ಅದಲ್ಲದೇ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಪ್ರತಾಪ್‌ ಸಿಂಹ, ಡಿಕೆ ಶಿವಕುಮಾರ್‌ ಅವರನ್ನು ಈ ವೇಳೆ ಹೊಗಳಿದ್ದು ವಿಶೇಷವಾಗಿತ್ತು. ಚುನಾವಣಾ ತಂತ್ರಗಾರಿಕೆ ಏಜೆನ್ಸಿ ಮೂಲಕ ಗ್ಯಾರಂಟಿ ಯೋಜನೆ ರೂಪಿಸಿದವರು ಡಿಕೆ ಶಿವಕುಮಾರ್‌. ಅವರು ಓರ್ವ ಫೈಟರ್‌. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಡಿಕೆ ಶಿವಕುಮಾರ್‌ ಅವರ ಹೋರಾಟ ಪ್ರಮುಖ ಕಾರಣವಾಗಿದೆ. ಅವರು ನಮ್ಮ ಎದುರಾಳಿ ಇರಬಹುದು. ಆದರೆ, ಅವರು ಮುಖ್ಯಮಂತ್ರಿ ಆಗಬೇಕಿತ್ತು ಎಂದಿದ್ದಾರೆ.

ಮನೆ ಮನೆಗೂ ಕೇಂದ್ರದ ಸಾಧನೆ ತಲುಪಿಸುತ್ತೇವೆ!

ಇನ್ನು, ಪ್ರಧಾನಿ ನರೇಂದ್ರ ಮೋದಿ ದೇಶದ ಚುಕ್ಕಾಣಿ ಇಡಿದು 9 ವರ್ಷ ಆಯ್ತು, ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಪ್ರಚಾರ ಅಭಿಯಾನ ಆರಂಭಿಸುತ್ತೇವೆ. ಒಂದು ತಿಂಗಳ ಕಾಲ ರಾಜ್ಯದಲ್ಲಿ ಮನೆ ಮನೆಗೂ ತಲುಪುತ್ತೇವೆ. ಜೂನ್‌ 22ರಂದು ಕಾರ್ಯಕರ್ತರೊಂದಿಗೆ ದೊಡ್ಡ ಸಭೆ ಮಾಡ್ತಿದ್ದೇವೆ. ಈ ಸಭೆಯ ನೇತೃತ್ವವನ್ನ ಸಚಿವೆ ನಿರ್ಮಲಾ ಸೀತಾರಾಮನ್ ವಹಿಸಲಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವಧಿಯಲ್ಲಿ ಮೈಸೂರಿಗೆ ‌ನೀಡಿರುವ ಕೊಡುಗೆ ಅಪಾರ, ಮೋದಿ ಅವಧಿಯಲ್ಲಿ ವಾಯು, ರಸ್ತೆ, ರೈಲು ಸಂಪರ್ಕ ಜಾಸ್ತಿಯಾಗಿದೆ. ಮೈಸೂರು-ಬೆಂಗಳೂರು ಹೈವೇಗೆ 10 ಸಾವಿರ ಕೋಟಿ ರೂ. ನೀಡಿದ್ದಾರೆ ಮೈಸೂರಿಗೆ ಔಟರ್ ರಿಂಗ್ ರೋಡ್ ಮಾಡಲಾಗುತ್ತೆ. ರೈಲ್ವೇ ಇಲಾಖೆಯಲ್ಲೂ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿವೆ. ರೈಲ್ವೇ ನಿಲ್ದಾಣದಲ್ಲಿ ಹೊಸ ಪ್ಲಾಟ್ ಫಾರಂ ಕಾರ್ಯ ನಡೆಯುತ್ತಿದೆ. ಮೈಸೂರಿಗೆ ಗ್ರಾಮ ಸಡಕ್ ಯೋಜನೆಯಡಿ 152 ಕೋಟಿ ರೂ. ಹಣ ನೀಡಿದ್ದಾರೆ. ಕುಡಿಯುವ ನೀರಿಗೂ ಹಲವು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ