Mysore
20
overcast clouds
Light
Dark

ನಾನು ಸನಾತನವಾದವನ್ನು ಎಂದೆಂದಿಗೂ ವಿರೋಧಿಸುತ್ತೇನೆ: ಉದಯನಿಧಿ ಪುನರುಚ್ಚಾರ

ಚೆನ್ನೈ : ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹಾಗೂ ಪಿ.ಕೆ.ಶೇಖರ್ ಬಾಬು ಸನಾತನ ಧರ್ಮದ ಕುರಿತು ನೀಡಿರುವ ಹೇಳಿಕೆಯ ಕುರಿತು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿರುವ ಪೊಲೀಸರನ್ನು ಮದ್ರಾಸ್ ಹೈಕೋರ್ಟ್ ಟೀಕಿಸಿದ ಬೆನ್ನಿಗೇ, ಸನಾತನ ಧರ್ಮದ ಕುರಿತ ತಮ್ಮ ನಿಲುವನ್ನು ಸಚಿವ ಉದಯನಿಧಿ ಸ್ಟಾಲಿನ್ ಸೋಮವಾರ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ ಎಂದು indiatoday.in ವರದಿ ಮಾಡಿದೆ.

ಇದಕ್ಕೂ ಮುನ್ನ, ಯಾವುದೇ ವ್ಯಕ್ತಿ ವಿಭಜನಾತ್ಮಕ ಯೋಜನೆಗಳನ್ನು ಅಥವಾ ಯಾವುದೇ ಸಿದ್ಧಾಂತದ ನಿರ್ಮೂಲನೆಗಾಗಿ ಪ್ರಚೋದಿಸುವ ಹಕ್ಕು ಹೊಂದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿತ್ತು.

ಈ ಮುನ್ನ, ಸನಾತನ ಧರ್ಮವನ್ನು ಡೆಂಗ್ಯೂ ಹಾಗೂ ಮಲೇರಿಯಾಗೆ ಹೋಲಿಸಿದ್ದ ಉದಯನಿಧಿ ಸ್ಟಾಲಿನ್, ನಾನು ಯಾವುದೇ ತಪ್ಪು ಹೇಳಿಕೆ ನೀಡಿಲ್ಲ ಹಾಗೂ ಕಾನೂನು ಪರಿಣಾಮಗಳನ್ನು ಎದುರಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

“ನಾನು ಯಾವುದೇ ತಪ್ಪು ಹೇಳಿಕೆ ನೀಡಿಲ್ಲ. ನಾನು ಏನು ಹೇಳಿದ್ದೆ ಅದು ಸರಿಯಿದೆ ಹಾಗೂ ನಾನು ಅದನ್ನು ಕಾನೂನಾತ್ಮಕವಾಗಿ ಎದುರಿಸುತ್ತೇನೆ. ನಾನು ನನ್ನ ಹೇಳಿಕೆಯನ್ನು ಬದಲಿಸುವುದಿಲ್ಲ. ಅಂಬೇಡ್ಕರ್, ಪೆರಿಯಾರ್ ಅಥವಾ ತಿರುಮವಲನ್ ಹೇಳಿರುವುದಕ್ಕಿಂತ ಭಿನ್ನವಾಗಿ ನಾನೇನನ್ನೂ ಹೇಳಿಲ್ಲ. ನಾನೀಗ ಶಾಸಕ, ಸಚಿವ ಅಥವಾ ಯುವ ಘಟಕದ ಕಾರ್ಯದರ್ಶಿಯಾಗಿರಬಹುದು. ನಾಳೆ ನಾನು ಅದೇನೂ ಅಲ್ಲದೆ ಇರಬಹುದು. ಆದರೆ, ಮನುಷ್ಯನಾಗಿರುವುದು ಬಹಳ ಮುಖ್ಯ” ಎಂದು ಅವರು ಪ್ರತಿಪಾದಿಸಿದ್ದಾರೆ.

“ನೀಟ್ ಆರು ವರ್ಷದ ಸಮಸ್ಯೆಯಾಗಿದ್ದರೆ, ಸನಾತನ ಧರ್ಮದ ಸಮಸ್ಯೆ ಕುರಿತು ಹಲವಾರು ವರ್ಷಗಳಿಂದ ನಾವೆಲ್ಲ ಮಾತನಾಡುತ್ತಿದ್ದೇವೆ. ಸನಾತನ ಧರ್ಮದ ಸಮಸ್ಯೆಯು ಹಲವಾರು ನೂರು ವರ್ಷಗಳಷ್ಟು ಹಳೆಯದಾಗಿದ್ದು, ನಾವದನ್ನು ಎಂದೆಂದಿಗೂ ವಿರೋಧಿಸಲೇಬೇಕು” ಎಂದು ಡಿಎಂಕೆ ನಾಯಕರೂ ಆದ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.

ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿರುವುದರಿಂದ ಅದನ್ನು ನಿರ್ಮೂಲನೆ ಮಾಡಬೇಕು ಎಂದು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಉದಯನಿಧಿ ಸ್ಟಾಲಿನ್ ಕರೆ ನೀಡಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ