ಮೈಸೂರು : ವರುಣಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ತಮ್ಮ ಆಸ್ತಿ ವಿವರವನ್ನು ಘೋಷಣೆ ಮಾಡಿದ್ದು, ಇದರಲ್ಲಿ ಸಿದ್ದರಾಮಯ್ಯಗಿಂತ ಅವರ ಪತ್ನಿಯೇ ಹೆಚ್ಚು ಶ್ರೀಮಂತೆಯಾಗಿದ್ದಾರೆ.
13 ಬಾರಿ ರಾಜ್ಯದ ಬಜೆಟ್ ಮಂಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, 2023ರ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಮೈಸೂರು, ಬೆಂಗಳೂರು ಸೇರಿದಂತೆ ಹಲವು ಕಡೆ ಆಸ್ತಿ ಹೊಂದಿದ್ದು, ಜೊತೆಗೆ ಸಾಲವನ್ನು ಸಹ ಹೊಂದಿರುವ ಬಗ್ಗೆ ವಿವರಣೆ ನೀಡಿದ್ದಾರೆ. ಅಲ್ಲದೆ, ಹಲವು ಕಡೆ ಇವರ ವಿರುದ್ಧ ಪ್ರಕರಣಗಳು ದಾಖಲಾಗಿ ತನಿಖಾ ಹಂತದಲ್ಲಿವೇ ಎಂದು ಮಾಹಿತಿ ನೀಡಿದ್ದಾರೆ.
ಪತಿ-ಪತ್ನಿ ಇಬ್ಬರು ಕೋಟಿ ಒಡೆಯರು : ಸಿದ್ದರಾಮಯ್ಯ ಅವರ ಒಟ್ಟು ಆಸ್ತಿ ಮೌಲ್ಯ 19.29 ಕೋಟಿ, ಅದರಲ್ಲಿ ಸಾಲ 6.89 ಕೋಟಿ. ಒಟ್ಟು ಆಸ್ತಿಯಲ್ಲಿ ಚರಾಸ್ತಿ 9.58 ಕೋಟಿ, ಸ್ಥಿರಾಸ್ತಿ 9.43 ಕೋಟಿ ಇದರ ಜೊತೆಗೆ ಪತ್ನಿ ಪಾರ್ವತಿ ಸಿದ್ದರಾಮಯ್ಯ ಒಟ್ಟು ಆಸ್ತಿ ಮೌಲ್ಯ 30.82 ಕೋಟಿ. ಅದರಲ್ಲಿ ಸಾಲ 16.24 ಕೋಟಿ, ಒಟ್ಟು ಚರಾಸ್ತಿ 11.26 ಕೋಟಿ, ಸ್ಥಿರಾಸ್ತಿ 19.56 ಕೋಟಿಯನ್ನು ಹೊಂದಿದ್ದಾರೆ. ಸಿದ್ದರಾಮಯ್ಯ ಹೆಸರಿನಲ್ಲಿ 28 ಲಕ್ಷ ರೂ. ಮೌಲ್ಯದ ಕಾರು ಹಾಗೂ 350 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ಇದೆ. ಹೆಂಡತಿ ಪಾರ್ವತಿ ಸಿದ್ದರಾಮಯ್ಯ ಅವರು 540 ಗ್ರಾಂ ಚಿನ್ನ, 4.5 ಕೆಜಿ ಬೆಳ್ಳಿ ಹೊಂದಿದ್ದಾರೆ. ಸಿದ್ದರಾಮಯ್ಯ ಅವರಿಗಿಂತ ಹೆಚ್ಚು ಶ್ರೀಮಂತೆಯಾದ ಅವರ ಪತ್ನಿ ಹೆಸರಿನಲ್ಲಿ ಸಾಲವು ಸಹ ಹೆಚ್ಚಾಗಿದೆ.
ಸಿದ್ದರಾಮಯ್ಯ ವಿರುದ್ಧ ಪ್ರಕರಣಗಳು: ಸಿದ್ದರಾಮಯ್ಯ ವಿರುದ್ಧ ಸಾರ್ವಜನಿಕ ಆಸ್ತಿ ವಿರೂಪ, ಕರ್ನಾಟಕ ಸಾಂಕ್ರಾಮಿಕ ರೋಗ ತಡೆ ಸೇರಿದಂತೆ ನಾನಾ ಕಾಯ್ದೆಯಡಿ ಮೈಸೂರು, ಕನಕಪುರ, ಮಂಡ್ಯ ಸೇರಿದಂತೆ ಹಲವು ಕಡೆ ಇವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ತನಿಖಾ ಹಂತದಲ್ಲಿವೆ. ಸಿದ್ದರಾಮಯ್ಯ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟರ್ ನಲ್ಲಿ ಖಾತೆ ಹೊಂದಿದ್ದು ಆದರೆ ವಾಟ್ಸಪ್ ಖಾತೆಯನ್ನು ಹೊಂದಿಲ್ಲ ಎಂದು ತಿಳಿಸಿದ್ದಾರೆ.