ನವದೆಹಲಿ : ಪ್ರಕರಣವೊಂದರಲ್ಲಿ ಪಶ್ಚಿಮ ಬಂಗಾಳದ ಸಾಕ್ಷಿದಾರರಿಗೆ ಉತ್ತರ ಪ್ರದೇಶದ ನ್ಯಾಯಾಲಯದ ಮುಂದೆ ಹಿಂದಿಯಲ್ಲಿ ಸಾಕ್ಷ್ಯ ನುಡಿಯುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.
”ಭಾರತವು ವಿವಿಧ ಜಾತಿ, ಧರ್ಮ, ಭಾಷೆಗಳನ್ನು ಹೊಂದಿರುವ ದೇಶ. ಪ್ರದೇಶವಾರು ಭಿನ್ನ ಭಾಷೆಗಳು ಅಸ್ತಿತ್ವದಲ್ಲಿವೆ. 22 ಅಧಿಕೃತ ಭಾಷೆಗಳಿವೆ. ಆದರೆ ಹಿಂದಿ ರಾಷ್ಟ್ರ ಭಾಷೆ ಎಂದು ಪರಿಗಣಿಸಲಾಗಿರುವ ಹಿನ್ನೆಲೆಯಲ್ಲಿ ಸಾಕ್ಷಿದಾರರು ಹಿಂದಿಯಲ್ಲಿ ಹೇಳಿಕೆಗಳನ್ನು ನೀಡಬೇಕು,” ಸುಪ್ರೀಂಕೋರ್ಟ್ ನ್ಯಾಯಮೂರ್ತಿ ದೀಪಂಕರ್ ದತ್ತಾ ಪ್ರಕರಣವೊಂದರ ವಿಚಾರಣೆ ವೇಳೆ ಹೇಳಿದ್ದಾರೆ.
ಅರ್ಜಿದಾರರಿಗೆ ಸೂಚಿಸಲು ಸಾಧ್ಯವಿಲ್ಲ
ಉತ್ತರ ಪ್ರದೇಶದ ಫತೇಹಗಡದ ಮೋಟಾರ್ ಅಪಘಾತ ಪರಿಹಾರ ನ್ಯಾಯಮಂಡಳಿಯಲ್ಲಿ ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್ 166ರ ಅಡಿ ಸಿನ್ಹಾ ಅವರು ಪರಿಹಾರ ಅರ್ಜಿ ಸಲ್ಲಿಸಿದ್ದರು. ಸಿನ್ಹಾ ಅವರ ಅಪಘಾತಕ್ಕೀಡಾದ ವಾಹನದ ಮಾಲೀಕರು. ಸಿಲಿಗುರಿಯಲ್ಲಿ ಅಪಘಾತ ಸಂಭವಿಸಿದ್ದರಿಂದ ಪರಿಹಾರ ಅರ್ಜಿಯನ್ನು ನಿರ್ಧರಿಸುವ ಪ್ರಕ್ರಿಯೆಯು ಡಾರ್ಜಿಲಿಂಗ್‌ನ ಎಂಎಸಿಟಿಯಲ್ಲಿ ನಡೆಯಬೇಕು ಎನ್ನುವುದು ಪ್ರಕರಣದ ವರ್ಗಾವಣೆಗೆ ಮಾಡಿರುವ ಮನವಿಯ ಪ್ರಾಥಮಿಕ ಅಂಶ ಎಂದು ಕೋರ್ಟ್ ಪರಿಗಣಿಸಿತು.
ಇದಕ್ಕೆ ವಿರುದ್ಧವಾಗಿ, ಸೆಕ್ಷನ್ 166ರ ಉಪ ಸೆಕ್ಷನ್ (2), ಹಕ್ಕುದಾರರು ತಾವು ವಾಸಿಸುವ ಪ್ರದೇಶದ ವ್ಯಾಪ್ತಿಯ ಅಥವಾ ಪ್ರತಿವಾದಿ ವಾಸಿಸುವ ಸ್ಥಳೀಯ ಮಿತಿಯಲ್ಲಿನ ಎಂಎಸಿಟಿಯನ್ನು ಸಂಪರ್ಕಿಸುವ ಅವಕಾಶ ಹೊಂದಿದ್ದಾರೆ. ದೂರುದಾರರು ಫರೂಕಾಬಾದ್ ಎಂಎಸಿಟಿಯನ್ನು ಸಂಪರ್ಕಿಸುವ ಆಯ್ಕೆ ಮಾಡಿಕೊಂಡಿದ್ದರು. ಈ ಆಯ್ಕೆಗೆ ಕಾನೂನು ಅವರಿಗೆ ಅವಕಾಶ ನೀಡಿದೆ. ಹೀಗಾಗಿ ಈ ಸಂಬಂಧ ಅರ್ಜಿದಾರರು ಯಾವುದೇ ಅಹವಾಲು ಸಲ್ಲಿಸುವಂತೆ ಇಲ್ಲ ಎಂದು ಪೀಠ ತಿಳಿಸಿದೆ. ವಿಶೇಷವೆಂದರೆ ದತ್ತಾ ಅವರೂ ಪಶ್ಚಿಮ ಬಂಗಾಳದವರಾಗಿದ್ದಾರೆ.





